ಇಡೀ ರಾಜ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಡೆ ನೋಡುತ್ತಿದೆ. ಕಾರಣ ಪ್ರಭಾವಿ ಸಚಿವ ಡಾ ಕೆ ಸುಧಾಕರ್ ಅವರನ್ನು ಸೋಲಿಸಿರುವ ಪ್ರದೀಪ್ ಈಶ್ವರ್. ಏಳೆಂಟು ವರ್ಷಗಳ ಹಿಂದೆ ನಗರದಲ್ಲಿ ಸಾಮಾನ್ಯನಾಗಿ ಓಡಾಡಿಕೊಂಡಿದ್ದ ಹುಡುಗ ಇಂದು ಪ್ರಭಾವಿ ಸಚಿವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ.
ಡಾ ಕೆ ಸುಧಾಕರ್ ತವರೂರು ಪೆರೇಸಂದ್ರದವರೇ ಆದ ಪ್ರದೀಪ್ ಈಶ್ವರ್ ಚಿಕ್ಕ ವಯಸ್ಸಲ್ಲೇ ಹೆತ್ತವರನ್ನು ಕಳೆದುಕೊಂಡು ಕಷ್ಟದಲ್ಲೇ ಬೆಳೆದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ನಂತರ ನಗರದ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೋಧಕ ವೃತ್ತಿ ಆರಿಸಿಕೊಂಡರು. ಒಬಿಸಿ ಬಲಿಜ ಸಮುದಾಯಕ್ಕೆ ಸೇರಿರುವ ಪ್ರದೀಪ್ ಈಶ್ವರ್, ಕೋಚಿಂಗ್ ಸೆಂಟರ್ಗಳಲ್ಲಿ ಪಾಠ ಮಾಡುತ್ತಿದ್ದ ಇವರು ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.
2016ರಿಂದ ಸಾರ್ವಜನಿಕ ಜೀವನ ಆರಂಭ!
ಪ್ರದೀಪ್ ಈಶ್ವರ್ ಮೊದಲು ಕಾಣಿಸಿಕೊಂಡಿದ್ದು 2016ರಲ್ಲಿ. ದೇವನಹಳ್ಳಿ ಬಳಿಯ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ವಿಫಲವಾದ ಬಳಿಕ ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ನಿರೂಪಕರಾಗಿ ಕೆಲಸ ಆರಂಭಿಸಿದರು. ಬಳಿಕ ಯೂಟ್ಯೂಬ್ನಲ್ಲಿ ಕಾಣಿಸಿಕೊಂಡ ಪ್ರದೀಪ್ ಈಶ್ವರ್ ಡಾ ಕೆ ಸುಧಾಕರ್ ವಿರುದ್ಧ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿದ್ದರು.
2018ರ ವಿಧಾನಸಭೆ ಚುನಾವಣೆ ವೇಳೆ ಹಾಲಿ ಶಾಸಕರಾಗಿದ್ದ ಡಾ ಕೆ ಸುಧಾಕರ್ ಅವರನ್ನು ಎದುರು ಹಾಕಿಕೊಂಡರು. ಅವರ ವಿರುದ್ಧ ನಾನಾ ವಿಡಿಯೋಗಳನ್ನು ಮಾಡಿದ್ದರು. ಸುಧಾಕರ್ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್ಕಿರಣ್ ಪರ ಭರ್ಜರಿ ಪ್ರಚಾರ ಮಾಡಿ ಸದ್ದು ಮಾಡಿದ್ದರು. ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ದೌರ್ಜನ್ಯ ಖಂಡಿಸಿ ಏಕಾಂಗಿಯಾಗಿ ಪ್ರತಿಭಟನೆಯೂ ಮಾಡಿದ್ದರು.
ಪರಿಶ್ರಮ ನೀಟ್ ಅಕಾಡೆಮಿಯ ಯಶಸ್ಸು!
2018ರಲ್ಲಿ ಡಾ ಕೆ ಸುಧಾಕರ್ ಗೆದ್ದ ನಂತರ ಬೆಂಗಳೂರಿಗೆ ತೆರಳಿದ್ದರು. ಆನಂತರ ಸಣ್ಣ ಮಟ್ಟದಲ್ಲಿ ಹುಟ್ಟು ಹಾಕಿದ ಪರಿಶ್ರಮ ನೀಟ್ ಅಕಾಡೆಮಿಯನ್ನು ಇಡೀ ರಾಜ್ಯವೇ ಎದ್ದು ನೋಡುವಂತೆ ಕಟ್ಟಿ ಬೆಳೆಸಿದ್ದರು. ‘ನಾನು ದ್ವೇಷ ರಾಜಕಾರಣ ಮಾಡಲ್ಲ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತೇನೆ. ನಗರದಲ್ಲಿ ಮನೆ ಮಾಡಲ್ಲ. ಪ್ರತಿ ದಿನ 4 ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನ ಉದ್ದೇಶ’ ಎನ್ನುತ್ತಾರೆ ನೂತನ ಶಾಸಕ ಪ್ರದೀಪ್ ಈಶ್ವರ್.
ಬದಲಾವಣೆ ಬಯಸಿದ ಚಿಕ್ಕಬಳ್ಳಾಪುರ ಜನ!
ತಮ್ಮ ತೆಲುಗು ಡೈಲಾಗ್ಗಳಿಂದಲೇ ಚುನಾವಣಾ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ ಗಮನ ಸೆಳೆದಿದ್ದರು. ಸಚಿವ ಡಾ ಕೆ ಸುಧಾಕರ್ ಅವರಿಗೆ ಚುನಾವಣಾ ಕಣದಲ್ಲಿ ತಕ್ಕ ತಿರುಗೇಟು ನೀಡಿದ್ದರು. ಅದರ ಪರಿಣಾಮವೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಇಡೀ ರಾಜ್ಯವೇ ನೋಡುವಂತಹ ಫಲಿತಾಂಶ ಹೊರಬಿದ್ದಿದೆ. ಚಿಕ್ಕಬಳ್ಳಾಪುರದ ಜನ ಈ ಬಾರಿ ಬದಲಾವಣೆ ಬಯಸಿ ಪ್ರದೀಪ್ ಈಶ್ವರ್ ಅವರನ್ನು ಗೆಲ್ಲಿಸಿದ್ದಾರೆ.