ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಟಿ ದೀಪಿಕಾ ದಾಸ್ ಸೀಕ್ರೇಟ್ ಆಗಿ ಗೋವಾದಲ್ಲಿ ಹಸೆಮಣೆ ಏರಿದ್ದಾರೆ. ಮದುವೆಯ ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದ ನಟಿ ಇದೀಗ ಮದುವೆಯಾಗಿರುವ ಹುಡುಗನ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ದೀಪಿಕಾ ಕೈ ಹಿಡಿದಿರೋ ದೀಪಕ್ ಹಿನ್ನೆಲೆ ಏನು ಗೊತ್ತಾ?
ರಿಯಲ್ ಎಸ್ಟೇಟ್ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್ ಜೊತೆ ನಟಿ ದೀಪಿಕಾ ದಾಸ್ ಮದುವೆ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ದೀಪಿಕಾ ದಾಸ್ ಮತ್ತು ದೀಪಕ್ ಡೇಟಿಂಗ್ ಮಾಡುತ್ತಿದ್ದು ಸಡನ್ ಆಗಿ ಗೋವಾದಲ್ಲಿ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದರೆ ಇದು ಸೀಕ್ರೇಟ್ ಮ್ಯಾರೇಜ್ ಅಲ್ಲ, ಸಾಕಷ್ಟು ತಿಂಗಳಿನಿಂದ ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೇವೆ ಎಂದು ನಟಿ ಪ್ರತಿಕ್ರಿಯಿಸಿದ್ದಾರೆ.
ನಾವಿಬ್ಬರು ನಾಲ್ಕು ವರ್ಷಗಳ ಹಿಂದೆ ನಾವು ಭೇಟಿ ಆದೆವು. ಕಳೆದೊಂದು ವರ್ಷದಿಂದ ಕಮಿಟೆಡ್ ರಿಲೇಷನ್ಶಿಪ್ನಲ್ಲಿ ಇದ್ದೆವು. ಮನೆಯವರಿಗೆಲ್ಲ ಗೊತ್ತಿತ್ತು. ಇದರಲ್ಲಿ ಏನೂ ಸಸ್ಪೆನ್ಸ್ ಇಲ್ಲ. ನಾನು ರಿಯಲ್ ಎಸ್ಟೇಟ್ ಡೆವೆಲಪರ್. ಇಲ್ಲಿಯೇ ಇರುವುದು. ಯುಕೆ ಹಾಗೂ ದುಬೈನಲ್ಲಿ ಸ್ಟಾರ್ಟಪ್ ಇದೆ. ಆದರೆ ನಾನು ಇಲ್ಲಿಯೇ ಇರುವ ಗೌಡ’ ಎಂದು ದೀಪಕ್ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ದೀಪಕ್ ಪಕ್ಕಾ ಗೌಡ, ಪಕ್ಕಾ ಕನ್ನಡಿಗ, ಪಕ್ಕಾ ದೇಸಿ ಹುಡುಗ. ನಮಗೆ ಅವರೇ ಬೇಕಾಗಿದ್ದು. ಫಾರಿನರ್ಸ್ ಆಗಲ್ಲ ನಮಗೆ. ದೀಪಕ್ ಧ್ವನಿ ಜೋರಾಗಿ ಬರಲ್ಲ. ಅವರನ್ನು ಮಾತಾಡಿಸಬೇಕು ಎಂದರೆ ನಾನೇ ಹತ್ತು ಸಲ ಕೇಳಬೇಕು’ ಎಂದು ಪತಿಯ ಬಗ್ಗೆ ನಟಿ ದೀಪಿಕಾ ದಾಸ್ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಹೆಂಡತಿಯ ನಟನಾ ವೃತ್ತಿಯ ಬಗ್ಗೆ ಮಾತನಾಡಿದ ದೀಪಕ್ ಅವರ ನಟನಾ ವೃತ್ತಿಗೆ ನನ್ನ ಸಹಕಾರ ಖಂಡಿತಾ ಇರುತ್ತದೆ’ ಎಂದಿದ್ದಾರೆ.
‘ನಾವು ನಾವಾಗಿಯೇ ಇರಬೇಕು ಅಂತ ದೀಪಕ್ ನನಗೆ ಹೇಳುತ್ತಾ ಇರುತ್ತಾರೆ. ನನ್ನ ಬೆಳವಣಿಗೆಯಲ್ಲಿ ಅವರ ಬೆಂಬಲ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗೆ ಇದೆ. ಅದು ಮಾಡಬೇಡ, ಇದು ಮಾಡಬೇಡ ಅಂತ ಅವರು ಯಾವತ್ತೂ ನನಗೆ ಹೇಳಿಲ್ಲ. ಡೇಟ್ ಮಾಡುವಾಗಲೂ ಹೇಳಿಲ್ಲ. ಮುಂದೆಯೂ ಹೇಳಲ್ಲ ಎಂಬ ನಂಬಿಕೆಯಿದೆ. ಪರ್ಸನಲ್ ಬೇರೆ, ಪ್ರೊಫೆಷನಲ್ ಬೇರೆ ಅಂತ ನಾವು ಇಟ್ಟುಕೊಂಡಿದ್ದೇವೆ. ಅವರ ವೃತ್ತಿಗೂ ನಮಗೂ ಸಂಬಂಧ ಇಲ್ಲ. ಅದು ಏನೆಂಬುದೇ ನನಗೆ ಗೊತ್ತಾಗುವುದಿಲ್ಲ. ಅದೇ ರೀತಿ ನಮ್ಮ ಪ್ರೊಫೆಷನ್ ಬಗ್ಗೆ ಅವರಿಗೆ ಜ್ಞಾನ ಇಲ್ಲ’ ಎಂದು ದೀಪಿಕಾ ದಾಸ್ ಹೇಳಿದ್ದಾರೆ.
ದೀಪಕ್ ಅವರಿಗೆ ಚಿತ್ರರಂಗದಲ್ಲಿ ಕೆಲವು ಮಂದಿ ಸ್ನೇಹಿತರು ಇದ್ದಾರೆ. ‘ಮುಂದಿನ ದಿನಗಳಲ್ಲಿ ನಾವು ಅವರನ್ನು ನಮ್ಮ ದಾರಿಗೆ ಎಳೆದುಕೊಳ್ಳಬೇಕು ಎಂದುಕೊಂಡಿದ್ದೇವೆ. ಪ್ರೊಡಕ್ಷನ್ ಮಾಡೋಣ ಎಂಬ ಆಲೋಚನೆ ಇದೆ. ಏನಾಗತ್ತೋ ನೋಡೋಣ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂದು ದೀಪಿಕಾ ದಾಸ್ ಹೇಳಿದ್ದಾರೆ.