ಹಸಿ ಬೆಳ್ಳುಳ್ಳಿ ಸೇವನೆಯಿಂದ ಹೆಚ್ಚು ಆರೋಗ್ಯಕರ ಲಾಭವನ್ನು ಪಡೆಯಬಹುದು. ಬೆಳ್ಳುಳ್ಳಿಯು ಅತ್ಯುತ್ತಮ ಆಯುರ್ವೇದ ಗುಣಗಳನ್ನು ಹೊಂದಿದ್ದು, ಇದನ್ನು ದಿನನಿತ್ಯದ ಆಹಾರ ತಯಾರಿಕೆಯಲ್ಲಿ ಬಳಸುವುದರಿಂದ ರುಚಿ ಹೆಚ್ಚುವುದಲ್ಲದೆ ದೇಹವನ್ನು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಪ್ರತಿದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಏನು ಪ್ರಯೋಜನ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಬೆಳ್ಳುಳ್ಳಿಯು ತುಂಬಾ ವಾಸನೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಅನೇಕರು ಬೆಳ್ಳುಳ್ಳಿ ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ, ಬೆಳ್ಳುಳ್ಳಿಯು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಮತ್ತು ಆಯಂಟಿವೈರಲ್ ಗುಣಗಳನ್ನು ಹೊಂದಿದೆ. ಆದ್ದರಿಂದ ಇದನ್ನು ಪ್ರತಿದಿನ ಹಸಿಯಾಗಿ ಅಥವಾ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದಲ್ಲದೇ ವೈರಾಣುವಿನ ಸೋಂಕುಗಳಿಂದ ದೇಹವನ್ನು ರಕ್ಷಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತದೆ. ಇದಲ್ಲದೇ ಹೃದಯಾಘಾತದ ಸಮಸ್ಯೆಗಳಿಂದ ಮುಕ್ತಿ ಹೊಂದುವುದರ ಜತೆಗೆ ರಕ್ತ ತೆಳುವಾಗಲು ನೆರವಾಗುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡುವಲ್ಲಿ ಇದರ ಗುಣಲಕ್ಷಣಗಳು ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೆ, ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಇದು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬೆಳ್ಳುಳ್ಳಿ ಒಂದು ಉತ್ತಮ ಔಷಧವಾಗಿದೆ. ಇದು ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಬೆಳ್ಳುಳ್ಳಿಯನ್ನು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.