ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಮುಂದಿನ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಹಾಗಾದ್ರೆ ಇಷ್ಟೊಂದು ಪೈಪೋಟಿಗೆ ಕಾರಣವಾಗಿರುವ ಮುಖ್ಯಮಂತ್ರಿ ಹುದ್ದೆಯ ವೇತನ ಎಷ್ಟು ಗೊತ್ತಾ? ಸಿಎಂ ಸಂಬಳ ನಿಮಗೆ ಗೊತ್ತಾದ್ರೆ ಇಷ್ಟೇನಾ ಎಂದು ನೀವು ಪ್ರಶ್ನಿಸಬಹುದು.
ಹೌದು, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಸದ್ಯ ತಿಂಗಳಿಗೆ ಮಾಸಿಕ 75 ಸಾವಿರ ರೂ. ವೇತನ ಸಿಗುತ್ತದೆ. 2022ಕ್ಕೂ ಮೊದಲು ಕರ್ನಾಟಕದ ಸಿಎಂ ವೇತನ 50 ಸಾವಿರ ರೂ. ಇತ್ತು. ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮಕ್ಕೆ 2022ರಲ್ಲಿ ತಿದ್ದುಪಡಿ ತಂದು ಮುಖ್ಯಮಂತ್ರಿ ಹಾಗೂ ಶಾಸಕರು, ಪರಿಷತ್ ಸದಸ್ಯರು, ಸ್ಪೀಕರ್ ಹಾಗೂ ವಿರೋಧ ಪಕ್ಷದ ನಾಯಕರ ವೇತನವನ್ನು ಹೆಚ್ಚಿಸಲಾಗಿತ್ತು.
ಕೇವಲ ಮಾಸಿಕ ವೇತನ ಅಷ್ಟೇ ಅಲ್ಲದೇ ಅನೇಕ ಭತ್ಯೆಗಳನ್ನು ಸಿಎಂ ಪಡೆಯುತ್ತಾರೆ. ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂ., ಮನೆ ನಿರ್ವಹಣೆ ಭತ್ಯೆ 30,000 ರೂ., ಪ್ರತಿ ದಿನದ ಪ್ರಯಾಣ ಭತ್ಯೆ 2,500 ರೂ., ವೈಯಕ್ತಿಕ ಆಹಾರ, ವಸ್ತುಗಳ ಖರೀದಿ, ಇತರೆ ಭತ್ಯೆಗಳು ಎಂದು 4.5 ಲಕ್ಷ ರೂ. ಅನ್ನು ನೀಡಲಾಗುತ್ತದೆ. ರೋಡ್ ಮೈಲೇಜ್ ಭತ್ಯೆ ಎಂದು ಕಿಮೀಗೆ 30 ರೂ. ಅನ್ನು ನೀಡಲಾಗುತ್ತದೆ. ಅದರ ಜೊತೆಗೆ 1,500 ಲೀಟರ್ ಇಂಧನ ಪ್ರತಿ ತಿಂಗಳು ಉಚಿತವಾಗಿ ನೀಡಲಾಗುತ್ತದೆ.
ಮುಖ್ಯಮಂತ್ರಿಗಳ ವೇತನ/ಭತ್ಯೆ | ರೂಪಾಯಿ |
ವೇತನ | 75,000 ರೂ. |
ಮನೆ ಬಾಡಿಗೆ ಭತ್ಯೆ | 1,20,000 ರೂ. |
ಮನೆ ನಿರ್ವಹಣೆ ಭತ್ಯೆ | 30,000 ರೂ. |
ವೈಯಕ್ತಿಕ ಆಹಾರ, ವಸ್ತುಗಳ ಖರೀದಿ, ಇತರೆ ಭತ್ಯೆಗಳು | 4,50,000 ರೂ. |
ಪ್ರತಿ ದಿನದ ಪ್ರಯಾಣ ಭತ್ಯೆ | 2,500 ರೂ. |
ರೋಡ್ ಮೈಲೇಜ್ ಭತ್ಯೆ | ಕಿಮೀಗೆ 30 ರೂ. |
ಉಚಿತ ಇಂಧನ | 1500 ಲೀಟರ್ ಪೆಟ್ರೋಲ್ |
ಪ್ರಯಾಣ, ರೋಡ್ ಮೈಲೇಜ್ ಭತ್ಯೆ ಹೊರತುಪಡಿಸಿದರೆ ಮುಖ್ಯಮಂತ್ರಿಗಳಿಗೆ ವೇತನ ಹಾಗೂ ಎಲ್ಲ ಭತ್ಯೆ ಸೇರಿ 6,75,000 ರೂ. ಬರುತ್ತದೆ. ಇನ್ನು 1500 ಲೀಟರ್ ಪೆಟ್ರೋಲ್ ಎಂದರೆ 1,50,000 ಲಕ್ಷ ರೂ. ಕೂಡ ಕರ್ನಾಟಕ ಸಿಎಂಗೆ ಸಿಗುತ್ತದೆ. ಒಟ್ಟು ಎಲ್ಲ ಸೇರಿ ಪ್ರತಿ ತಿಂಗಳು ಸುಮಾರು 10 ಲಕ್ಷ ರೂ.ವರೆಗೂ ಕರ್ನಾಟಕ ಮುಖ್ಯಮಂತ್ರಿಗೆ ವೇತನ ಮತ್ತು ಭತ್ಯೆ ಸಿಗುತ್ತದೆ. ಇದರೊಂದಿಗೆ ಶಾಸಕ ಸ್ಥಾನದ ವೇತನವೂ ಮುಖ್ಯಮಂತ್ರಿಗಳಿಗೆ ಸಿಗುತ್ತದೆ.