ಬಾಲಿವುಡ್ ನ (Bollywood)ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮೊನ್ನೆಯಷ್ಟೇ ನೇಣಿಗೆ ಶರಣಾಗಿದ್ದರು. ಕಲಾನಿರ್ದೇಶನಕ್ಕಾಗಿ (Art Director) ಬರೋಬ್ಬರಿ ನಾಲ್ಕು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ ಹಾಗೂ ಸೂಪರ್ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿದ್ದ ಮತ್ತೂ ಸ್ವಂತ ಸ್ಟುಡಿಯೋ ಹೊಂದಿದ್ದ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ಆತಂಕಕ್ಕೆ ದೂಡಿತ್ತು. ಇದೀಗ ಅದರ ಹಿಂದಿನ ಕಾರಣ ಬಹಿರಂಗವಾಗಿದೆ.
ನಿತಿನ್ ದೇಸಾಯಿ ತಮ್ಮದೇ ಆದ ‘ಎನ್.ಡಿ ಸ್ಟುಡಿಯೋ’ ಹೊಂದಿದ್ದರು. ಈ ಸ್ಟುಡಿಯೋಗಾಗಿ ಅವರು ಸಾಲವನ್ನು ಪಡೆದಿದ್ದರು. ಕಾಲಮಿತಿಯೊಳಗೆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಟುಡಿಯೋಗಾಗಿ ಇವರು 252 ಕೋಟಿ ರೂಪಾಯಿ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸಾಲ ತೀರಿಸಲು ಆಗದ್ದಕ್ಕೆ ನ್ಯಾಯಾಲಯ ಕಳೆದ ವಾರವಷ್ಟೇ ಅವರಿಗೆ ನೋಟಿಸ್ ನೀಡಿತ್ತು. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಬಾಲಿವುಡ್ (Bollywood)ನಲ್ಲಿ ಕಲಾ ನಿರ್ದೇಶಕರಾಗಿ, ನಿರ್ದೇಶಕರಾಗಿ, ಪ್ರೊಡಕ್ಷನ್ ಡಿಸೈನರ್ ಆಗಿ ಹೀಗೆ ವಿವಿಧ ವಿಭಾಗಗಳಲ್ಲಿ ದೇಸಾಯಿ ಕೆಲಸ ಮಾಡಿದ್ದರು. ಅಲ್ಲದೇ, ಹಿಂದಿ ಮತ್ತು ಮರಾಠಿ ಕಿರುತೆರೆಯಲ್ಲೂ ಸಾಕಷ್ಟು ಕೆಲಸ ಮಾಡಿದ್ದರು. ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಖ್ಯಾತ ನಿರ್ದೇಶಕರ ಸಿನಿಮಾಗಳಿಗೆ ಸೆಟ್ ಹಾಕಿದ್ದ ಹೆಗ್ಗಳಿಕೆ ಇವರದ್ದು.
ಆಗಸ್ಟ್ 9ಕ್ಕೆ ಅವರು 58ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ಇಂಥದ್ದೊಂದು ತಪ್ಪು ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ ಎನ್ನುತ್ತಾರೆ ದೇಸಾಯಿ ಆಪ್ತರು. ಕಲಾ ನಿರ್ದೇಶನಕ್ಕಾಗಿಯೇ ಅವರು 4 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಮೊನ್ನೆ ಮುಂಬೈನ ಕರ್ಜತ್ ಎನ್.ಡಿ ಸ್ಟುಡಿಯೋದಲ್ಲಿ ನೇಣಿಗೆ (Suicide) ಶರಣಾಗಿದ್ದಾರೆ.