ಪಿವಿಆರ್ ಐನಾಕ್ಸ್ನಲ್ಲಿ ಸಿನಿಮಾ ನೋಡಲು ಹೋಗುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಹೀರಾತು ಪ್ರಸಾರ ಸಂಪೂರ್ಣವಾಗಿ ನಿಲ್ಲಲಿದೆ. ಆ ಬಳಿಕ ಸಿನಿ ಅಭಿಮಾನಿಗಳು ಯಾವುದೇ ಜಾಹೀರಾತಿನ ಕಿರಿಕಿರಿ ಇಲ್ಲದೆ ಸಿನಿಮಾ ನೋಡಬಹುದಾಗಿದೆ. ಹೀಗೊಂದು ಯೋಜನೆಯನ್ನು ಸಂಸ್ಥೆ ರೂಪಿಸುತ್ತಿದೆ.
ದಿನದ ಒಟ್ಟಾರೆ ಜಾಹೀರಾತು ಪ್ರದರ್ಶನದ ಅವಧಿಯಲ್ಲಿ ಒಂದು ಶೋನ ಹೆಚ್ಚುವಾರಿಯಾಗಿ ಪ್ರದರ್ಶಿಸಬಹುದು ಅನ್ನೋದು ಸಂಸ್ಥೆಯ ಆಲೋಚನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ನಿಜವಾಗಿದ್ದರೆ ಸಿನಿ ಪ್ರಿಯರಿಗೆ ಸಖತ್ ಖುಷಿಯಾಗಲಿದೆ.
ಪಿವಿಆರ್-ಐನಾಕ್ಸ್ಗಳಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಈಗ ಇದನ್ನು ಬಂದ್ ಮಾಡಲು ಸಂಸ್ಥೆ ಮುಂದಾಗಿದೆ ಎಂದು ಮನಿ ಕಂಟ್ರೋಲ್ ವೆಬ್ಸೈಟ್ ವರದಿ ಮಾಡಿದೆ.
ಜಾಹೀರಾತು ಪ್ರದರ್ಶನಗಳಿಂದ ಪಿವಿಆರ್ ಐನಾಕ್ಸ್ಗೆ ದೊಡ್ಡ ಮಟ್ಟದ ಲಾಭ ಆಗುತ್ತಿದೆ. ಇದನ್ನು ನಿಲ್ಲಿಸಿದರೆ ಮುಂದೇನು ಎನ್ನುವ ಪ್ರಶ್ನೆ ಬರುತ್ತಿದೆ. ಜಾಹೀರಾತಿನ ಬದಲು ಒಂದು ಶೋನ ಹೆಚ್ಚುವರಿಯಾಗಿ ಪ್ರದರ್ಶಿಸಲು ಸಂಸ್ಥೆ ಮುಂದಾಗಿದೆ. ಇದರಿಂದ ಹೆಚ್ಚಿನ ಜನರು ಸಿನಿಮಾ ನೋಡಲು ಬರುತ್ತಾರೆ. ಇದರಿಂದ ಆಹಾರ ಹಾಗೂ ಪಾನೀಯಗಳ ಮಾರಾಟ ಕೂಡ ಹೆಚ್ಚುತ್ತದೆ ಅನ್ನೋದು ಸಂಸ್ಥೆಯ ಆಲೋಚನೆ. ಇದನ್ನು ಪುಣೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆಯಂತೆ. ನಂತರ ಇದನ್ನು ಇತರ ಕಡೆಗಳಿಗೂ ತರಲು ಸಂಸ್ಥೆ ಆಲೋಚಿಸಿದೆ ಎನ್ನಲಾಗುತ್ತಿದೆ.