ನಾವು ಮನೆಯಲ್ಲಿ ದಿನ ಬಳಕೆ ಮಾಡುವ ಬಹುತೇಕ ಆಹಾರ ಪದಾರ್ಥಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇರುವುದಿಲ್ಲ. ಆದರೂ ಕೂಡ ಆಗಾಗ ತಿನ್ನುತ್ತಿರುತ್ತೇವೆ. ಅವುಗಳಿಂದ ಪರೋಕ್ಷವಾಗಿ ನಮಗೆ ಪ್ರಯೋಜನಗಳು ಸಿಗುತ್ತಿರುತ್ತವೆ. ಒಂದೆರಡು ಒಳ್ಳೆಯ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದರಿಂದ ಸಿಗುವ ಆರೋಗ್ಯದ ಲಾಭಗಳು ಎರಡು ಪಟ್ಟು ಇರುತ್ತವೆ ಎಂದು ಹೇಳಬಹುದು.
ಇದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ಮೊಸರಿನ ಜೊತೆ ಬೆಲ್ಲ ಸೇವನೆ ಮಾಡುವುದು. ನಮ್ಮ ಆರೋಗ್ಯಕ್ಕೆ ಇವುಗಳು ಹೆಚ್ಚು ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಹಾರ ತಜ್ಞರ ಪ್ರಕಾರ ಉತ್ತಮ ಆಹಾರ ಪದಾರ್ಥಗಳ ಕಾಂಬಿನೇಶನ್ ಇವುಗಳು ಎನ್ನುವುದನ್ನು ಮರೆಯಬಾರದು. ಹೌದಾದರೆ ಮೊಸರಿನ ಜೊತೆ ಬೆಲ್ಲ ಸೇವನೆ ಮಾಡುವುದರಿಂದ ಏನಿಲ್ಲ ಆರೋಗ್ಯ ಪ್ರಯೋಜನಗಳು ನಮಗೆ ಸಿಗುತ್ತವೆ ಎಂದು ನೋಡುವುದಾದರೆ..
ನಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇರುವುದಿಲ್ಲ
ಇತ್ತೀಚಿನ ಜನರಲ್ಲಿ ರಕ್ತಹೀನತೆ ಅಥವಾ ಅನಿಮಿಯಾ ತುಂಬಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಯಾವುದೇ ವಯಸ್ಸಿನಲ್ಲಿ ಇಂತಹ ಸಮಸ್ಯೆ ಕಂಡು ಬರಬಹುದು. ಯಾರಿಗೆ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುತ್ತದೆ ಅವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಆದರೆ ಇದಕ್ಕೆ ಸುಲಭವಾದ ಪರಿಹಾರ ಎಂದರೆ ಮೊಸರಿನ ಜೊತೆ ಬೆಲ್ಲ ಸೇವನೆ ಮಾಡುವ ಅಭ್ಯಾಸವನ್ನು ದಿನದ ಯಾವುದಾದರೂ ಒಂದು ಸಮಯದಲ್ಲಿ ಇಟ್ಟುಕೊಳ್ಳುವುದು. ಇದರಿಂದ ಬಹಳ ವೇಗವಾಗಿ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಅನಿಮಿಯ ಸಮಸ್ಯೆ ದೂರವಾಗುತ್ತದೆ.
ಮುಟ್ಟಿನ ನೋವಿಗೆ ಸುಲಭ ಪರಿಹಾರ
ಮಹಿಳೆಯರು ತಮ್ಮ ಮುಟ್ಟಿನ ಸಂದರ್ಭದಲ್ಲಿ ಅನುಭವಿಸುವ ಹೊಟ್ಟೆ ನೋವು ಮತ್ತು ಹೊಟ್ಟೆ ಸೆಳೆತ ಸಮಸ್ಯೆಗೆ ಮೊಸರು ಮತ್ತು ಬೆಲ್ಲ ಉತ್ತಮ ಪರಿಹಾರವನ್ನು ಒದಗಿಸಬಲ್ಲದು ಎಂದು ಹೇಳುತ್ತಾರೆ.
ಏಕೆಂದರೆ ಹೊಟ್ಟೆಯ ಮೇಲೆ ಇದು ನೇರವಾದ ಪ್ರಭಾವಬೀರಿ ತನ್ನ ನೋವು ನಿವಾರಕ ಗುಣಲಕ್ಷಣಗಳಿಂದ ಹೊಟ್ಟೆ ನೋವನ್ನು ಸುಲಭವಾಗಿ ಪರಿಹಾರ ಮಾಡುತ್ತದೆ. ಹಾಗಾಗಿ ಮಹಿಳೆಯರಿಗೆ ಸದಾಕಾಲ ಬೆಲ್ಲ ಮತ್ತು ಮೊಸರು ಕಾಂಬಿನೇಶನ್ ಅತ್ಯಗತ್ಯ ಎಂದು ಹೇಳಬಹುದು.
ಶೀತ ಮತ್ತು ಕೆಮ್ಮಿಗೆ ರಾಮಬಾಣ
ಈಗ ಮಳೆಗಾಲ ಆಗಿರುವುದರಿಂದ ಯಾರ ಆರೋಗ್ಯ ಬೇಕಾದರೂ ಶೀತದ ಸಮಸ್ಯೆಗಳಿಗೆ ಗುರಿಯಾಗಬಹುದು. ಇದ್ದಕ್ಕಿದ್ದಂತೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳಬಹುದು.
ಆದರೆ ಕೇವಲ ಮಾತ್ರೆಗಳಿಂದ ಮಾತ್ರ ಇಂತಹ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ ಎಂಬ ಮನಸ್ಥಿತಿಯನ್ನು ಬಿಟ್ಟರೆ, ಬೆಲ್ಲ ಮತ್ತು ಮೊಸರು ಕಾಂಬಿನೇಷನ್ ಅದ್ಭುತ ನೈಸರ್ಗಿಕ ಆಯ್ಕೆಯಾಗಿ ಪರಿಣಾಮಕಾರಿಯಾದ ರೀತಿಯಲ್ಲಿ ಕೆಲಸ ಮಾಡಬಲ್ಲದು.
ಏಕೆಂದರೆ ಇವುಗಳ ಮಿಶ್ರಣದಲ್ಲಿ ಪೊಟಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ, ಮ್ಯಾಂಗನೀಸ್ ಮತ್ತು ತಾಮ್ರದ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಮನುಷ್ಯನ ದೇಹದಲ್ಲಿ ಶೀತದ ವಾತಾವರಣವನ್ನು ದೂರ ಮಾಡುವಲ್ಲಿ ಇವುಗಳು ಹೆಚ್ಚು ಪ್ರಯೋಜನಕಾರಿ.
ಮೊಸರಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೆಚ್ಚಾಗಿರುವ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಮತ್ತು ನಮ್ಮ ದೇಹವನ್ನು ಸೋಂಕು ಮುಕ್ತವಾಗಿಸುವಲ್ಲಿ ಇದರ ಪಾತ್ರವನ್ನು ಮರೆಯುವಂತಿಲ್ಲ.
ತೂಕ ನಿಯಂತ್ರಣದಲ್ಲಿ ತುಂಬಾ ಪರಿಣಾಮಕಾರಿ
ಮೊಸರು ಮತ್ತು ಬೆಲ್ಲವನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಆರೋಗ್ಯಕರವಾದ ರೀತಿಯಲ್ಲಿ ನಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಏಕೆಂದರೆ ಬೆಲ್ಲ ಸೇವನೆಯಿಂದ ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆ ಚುರುಕುಗೊಳ್ಳುತ್ತದೆ. ಜೊತೆಗೆ ವೇಗವಾಗಿ ನಮ್ಮ ದೇಹದ ತೂಕವನ್ನು ತಗ್ಗಿಸುವಲ್ಲಿ ಮೊಸರು ಕೂಡ ಪರಿಣಾಮ ಬೀರುತ್ತದೆ.
ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಮೊಸರು ನಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವ ಜೊತೆಗೆ ಇಡೀ ದಿನ ನಾವು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ವ್ಯಾಯಾಮ ಮಾಡುವವರು ಬೆಲ್ಲ ಮತ್ತು ಮೊಸರಿನ ಕಾಂಬಿನೇಷನ್ ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.