ಬೆಂಗಳೂರು: ಗೃಹಜ್ಯೋತಿ ಕಾರ್ಯಕ್ರಮ ಅನುಷ್ಠಾನ ವಿಚಾರವಾಗಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹೊಸ ಮನೆಗಳಿಗೆ ದಾಖಲೆ ಇರಲ್ಲ. ಹಾಗಾಗಿ ಹೊಸ ಮನೆಗಳಿಗೂ ಫ್ರೀ ಕರೆಂಟ್ ನೀಡಲಾಗುವುದು. ಹೊಸದಾಗಿ ಸಂಪರ್ಕದ ಮನೆಗಳಿಗೆ, ಹೊಸ ಮನೆ ಬಾಡಿಗೆದಾರರಿಗೂ ಇದು ಅನ್ವಯವಾಗಲಿದೆ. ಒಂದು ವರ್ಷದ ತನಕ ಈ ನಿಯಮ ಇರುತ್ತದೆ. ಆ ಬಳಿಕ ಅವರು ಬಳಸಿದ ವಾರ್ಷಿಕ ಸರಾಸರಿ ಆಧಾರದ ಮೇಲೆ ಯೂನಿಟ್ ಮರು ಪರಿಷ್ಕರಣೆ ಮಾಡಲಾಗುವುದು. ಉಳಿದಂತೆ ಎಲ್ಲ ಉಚಿತ ಕರೆಂಟ್ ಮಾರ್ಗಸೂಚಿಗಳು ಹೊಸ ಮನೆ ಸಂಪರ್ಕ, ಹೊಸ ಮನೆ ಬಾಡಿಗೆದಾರರಿಗೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಹೊಸ ಮನೆಗೆ ಬರುವವರಿಗೆ ದಾಖಲೆ ಇರಲ್ಲ. ಅವರಿಗೆ 12 ತಿಂಗಳ ಸರಾಸರಿಯಂತೆ 53 ಯುನಿಟ್ ಮತ್ತು 10% ಹೆಚ್ಚುವರಿ ಸೇರಿಸಿ ಒಟ್ಟು 58 ಅಥವಾ 59 ಯೂನಿಟ್ ನೀಡಲಾಗುವುದು. ಹೊಸ ಮನೆಯ ಬಾಡಿಗೆದಾರರಿಗೂ ಇದು ಅನ್ವಯ. ಜೊತೆಗೆ ಆ ಆರ್ಆರ್ ನಂಬರ್ನಲ್ಲಿ ಇರುವ ಹಳೆಯ ಬಾಡಿಗೆದಾರರಿಗೂ ಅನ್ವಯವಾಗಲಿದೆ. ಅಂದಾಜು ಸಿಗದಿರುವ, ಹೊಸದಾಗಿ ಬಾಡಿಗೆಗೆ ಬರುವ ಮನೆಯವರಿಗೆ ಇದು ಅನ್ವಯಿಸುತ್ತದೆ. ಹೊಸ ಮನೆಯವರಿಗೆ, ಹೊಸ ಬಾಡಿಗೆಯವರಿಗೆ ಏನ್ ಮಾಡ್ತೀರಾ ಅನ್ನೋ ಪ್ರಶ್ನೆ ಬಂತು. ಅದಕ್ಕೆ ಈ ಹೊಸ ಸೂತ್ರ ಜಾರಿಗೆ ಬರಲಿದೆ. ಈ ಸರಾಸರಿ ಯುನಿಟ್ ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಅನ್ವಯಿಸಿ ಸರಾಸರಿ ಮಾಡಲಾಗ್ತಿದೆ ಎಂದು ಹೇಳಿದರು.
ವಿದ್ಯುತ್ ದರ ಹೆಚ್ಚಳ ಕುರಿತು ಮಾತನಾಡಿ, ಅದು ಕೆಇಆರ್ಸಿ ತೀರ್ಮಾನ. ಅದನ್ನ ಸರ್ಕಾರ ಮಾಡಿಲ್ಲ. ಮೊದಲು ಮೂರು ಹಂತದಲ್ಲಿ ಸ್ಲಾಬ್ ಇತ್ತು. ಈಗ ಎರಡು ಹಂತದಲ್ಲಿ ಸ್ಲಾಬ್ ಮಾಡಲಾಗಿದೆ. ಈಗ 0-100 ಯೂನಿಟ್ಗೆ 4.75 ಪೈಸೆ ದರ ಹೆಚ್ಚಳ ಆಗಿದೆ. 101- ಎಲ್ಲಾ ಯೂನಿಟ್ಗೆ 7 ರೂ. ಹೆಚ್ಚಳವಾಗಿದೆ. ಈ ಹೊರೆ ಯಾವ ಗ್ರಾಹಕರಿಗೂ ಹೋಗ್ತಿಲ್ಲ. ರಾಜ್ಯ ಸರ್ಕಾರವೇ ಭರಿಸಿಕೊಳ್ತಿದೆ. ಯಾರ ಮೇಲೂ ಹೊರೆ ಮಾಡುವುದಿಲ್ಲ. ಹಿಂದೆ ಇದ್ದ ನಾಲ್ಕು ಸ್ಲಾಬ್ಗೆ ಹೋಗಬಹುದಾ ಅಂತ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಹಿಂದಿನ ರೀತಿ ಮಾಪನಕ್ಕೆ ಹೋಗಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು