ಬೆಂಗಳೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Election) ಎಲ್ಲರೂ ಒಗ್ಗೂಡಿ ಬಿಜೆಪಿಯನ್ನು ಎದುರಿಸುವ ಸಂಬಂಧ ವಿಪಕ್ಷಗಳು ಐಎನ್ಡಿಐಎ ಹೆಸರಿನ ನಾಮಕರಣ ಮಾಡಿ ಹೊಸ ಮುನ್ನುಡಿಗೆ ನಾಂದಿ ಹಾಡಿವೆ.
ಯುಪಿಎ (UPA) ಹೊಸ ರೂಪದಲ್ಲಿ, ಹೊಸ ಹೆಸರಿನೊಂದಿಗೆ ಕಾಣಿಸಿಕೊಂಡಿದೆ. ಈ ಕೂಟಕ್ಕೆ ಇಂಡಿಯಾ ಎಂದು ಮರುನಾಮಕರಣ ಮಾಡಲಾಗಿದೆ. ಐಎನ್ಡಿಐಎ ಎಂದರೇ ಭಾರತ ರಾಷ್ಟ್ರೀಯ ಅಭಿವೃದ್ಧಿ ಸಮ್ಮಿಳಿತ ಕೂಟ (Indian National Developmental Inclusive Alliance) ಎಂದರ್ಥ.
ಲೋಕಸಮರದಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಉಪಸಮಿತಿ ರಚನೆ ಮಾಡಲಾಗಿದೆ. ಇಂಡಿಯಾ ಅಧ್ಯಕ್ಷರು ಮತ್ತು ಸಂಚಾಲಕರ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ.
ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿ ರಚನೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ. ದೇಶದಲ್ಲಿ ಜಾತಿಗಣತಿಗೆ 26 ರಾಜಕೀಯ ಪಕ್ಷಗಳ ಒಲವು ವ್ಯಕ್ತಪಡಿಸಿದ್ದು, ದ್ವೇಷ ರಾಜಕಾರಣದ ವಿರುದ್ದ ಸಾಮೂಹಿಕ ಹೋರಾಟ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಣಿಪುರದ ಗಲಭೆ ಸಂಬಂಧ ಸಾಮೂಹಿಕವಾಗಿ ಭೇಟಿಗೆ ಪ್ಲಾನ್ ಮಾಡಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಕೈಗೊಳ್ಳಲಾಗಿದೆ.
ʼಇಂಡಿಯಾʼಗೆ ಇರುವ ಸವಾಲುಗಳೇನು?
ಪ್ರಧಾನಿ ಅಭ್ಯರ್ಥಿ
ರಾಹುಲ್ ಗಾಂಧಿ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಅರವಿಂದ್ ಕೇಜ್ರಿವಾಲ್ ರೇಸ್ನಲ್ಲಿದ್ದಾರೆ.
ಕಾಂಗ್ರೆಸ್ `ತ್ಯಾಗ’ದ ಮೇಲೆ ವಿಪಕ್ಷಗಳ ಐಕ್ಯತೆ
ಈ ಕೂಟದಲ್ಲಿ ಎರಡು ಗುಂಪುಗಳಿವೆ. ಕಾಂಗ್ರೆಸ್ ನಾಯಕತ್ವವನ್ನು ಒಪ್ಪುವ ಗುಂಪು ಇನ್ನೊಂದು ಕಾಂಗ್ರೆಸ್ ನಾಯಕತ್ವ ಒಪ್ಪದ ಗುಂಪು ಇವೆ. ಎರಡನೇ ಗುಂಪಿನಲ್ಲಿ ಟಿಎಂಸಿ, ಎಎಪಿ, ಎಸ್ಪಿ, ಆರ್ಎಲ್ಡಿ, ಕೇರಳ ಕಾಂಗ್ರೆಸ್, ಎನ್ಸಿ, ಪಿಡಿಪಿ ಪಕ್ಷಗಳಿವೆ.
ಪಕ್ಷಗಳ ನಡುವೆ ಹೊಂದಾಣಿಕೆ ಸಮಸ್ಯೆ
ಕೇರಳದಲ್ಲಿ ಕಾಂಗ್ರೆಸ್, ಸಿಪಿಐಎಂ ಪಕ್ಷಗಳೇ ಶತ್ರುಗಳು. ಬಂಗಾಳದಲ್ಲಿ ಟಿಎಂಸಿ, ಸಿಪಿಐಎಂ, ಕಾಂಗ್ರೆಸ್ ಮಧ್ಯೆ ಫೈಟ್ ಇದೆ. ಪಂಜಾಬ್, ದೆಹಲಿಯಲ್ಲಿ ಎಎಪಿ, ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯಗಳಿವೆ.
ಸೀಟು ಹಂಚಿಕೆ ಸಮಸ್ಯೆ
ಬಿಹಾರ, ಯುಪಿ, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಸಮಸ್ಯೆಯಾಗುವ ಸಾಧ್ಯತೆಯಿದೆ.