ಬೆಂಗಳೂರು ; ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಲು ಮುಂದಾಗಿದ್ದು, ರಾಜ್ಯ ಸರ್ಕಾರದಿಂದ 100 ಕೋಟಿ ರೂಪಾಯಿ ಷೇರು ಬಂಡವಾಳ ಹೂಡಲಿದೆ.
ಆಕಸ್ಮಿಕ ಮರಣ ಹೊಂದುವ ಕುರಿ, ಮೇಕೆ ಸಾಕಾಣಿಕೆದಾರರು ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ʻಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆʼ ಎಂಬ ಧ್ಯೇಯವಾಕ್ಯ ಹೊಂದಿರುವ ʻನಂದಿನಿʼಯು ಕೋಟ್ಯಾಂತರ ಜನರ ಬದುಕಿಗೆ ಆಸರೆಯಾಗಿದೆ. ನಂದಿನಿ ಬ್ರಾಂಡ್ ಕನ್ನಡಿಗರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಹೊಂದಿದ್ದು, ಇದನ್ನು ಉಳಿಸಿ ಇನ್ನಷ್ಟು ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದ ವೇಳೆ ತಿಳಿಸಿದರು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ʻಅನುಗ್ರಹʼ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ನಿರ್ಲಕ್ಷಿಸಿದೆ ಎಂದ ಸಿದ್ದರಾಮಯ್ಯ, ಈ ಯೋಜನೆಯನ್ನು ಪುನರ್ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲಾಗುವುದು ಎಂದು ಹೇಳಿದ್ದಾರೆ.