ಬಿಸಿಲಿನ ಜೊತೆ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಕೂಡ ಏರುತ್ತಿದೆ. ಮತದಾನ ದಿನ ಸಮೀಪಿಸುತ್ತಿರುವುದರಿಂದ ಪ್ರತಿ ನಿಮಿಷ, ಪ್ರತಿ ದಿನವೂ ಮಹತ್ವದ್ದಾಗಿರುವುದರಿಂದ ಬಹುತೇಕ ನಾಯಕರು ಬೆಳಗ್ಗೆ- ಸಂಜೆ ಹಿತ ಮಿತ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಲಘು ಊಟೋಪಚಾರವನ್ನು ರೂಢಿಸಿಕೊಂಡಿದ್ದಾರೆ. ಹಲವು ನಾಯಕರು ಚುನಾವಣೆ ಮುಗಿಯುವವರೆಗೆ ಮಾಂಸಾಹಾರ ವರ್ಜಿಸಿ ಸಸ್ಯಾಹಾರ ಸೇವಿಸುತ್ತಿರುವುದು ಚುನಾವಣಾ ಪ್ರಚಾರಕ್ಕೆ ನೀಡಿರುವ ಆದ್ಯತೆಯನ್ನು ತೋರಿಸುತ್ತಿದೆ.
ಬಿಸಿಲ ಬೆಗೆಯಿಂದ ರಿಲೀಫ್ ಪಡೆಯಲು ಹಲವರು ಎಳನೀರು, ಮಜ್ಜಿಗೆ, ಜ್ಯೂಸ್, ತರಕಾರಿ, ಹಣ್ಣುಗಳ ಮೊರೆ ಹೋಗಿದ್ದಾರೆ. ಜತೆಗೆ ಡ್ರೈ ಫ್ರೂಟ್ಸ್ಗಳನ್ನು ಸೇವಿಸುತ್ತಿದ್ದಾರೆ. ಬಹಳಷ್ಟು ನಾಯಕರಿಗೆ ಪ್ರಚಾರ ಸಂದರ್ಭದಲ್ಲಿ ಸ್ಥಳೀಯ ನಾಯಕರು, ಕಾರ್ಯಕರ್ತರು, ಸಂಬಂಧಿಗಳ ಮನೆಯಲ್ಲೇ ತಿಂಡಿ, ಊಟದ ವ್ಯವಸ್ಥೆಯಾಗುತ್ತಿದೆ. ಬಹಿರಂಗ ಪ್ರಚಾರಕ್ಕೆ 11 ದಿನವಷ್ಟೇ ಬಾಕಿ ಉಳಿದಿದ್ದು, ಇಷ್ಟೂ ದಿನಗಳಲ್ಲಿ ಬಿರುಸಿನ ಪ್ರಚಾರಕ್ಕಾಗಿ ನಾಯಕರು ಡಯಟ್ ಮುಂದುವರಿಸುವ ಉಮೇದಿನಲ್ಲಿದ್ದಾರೆ. ಮೂರು ಪಕ್ಷಗಳ ಸಾರ್ ಪ್ರಚಾರಕರು, ನಾಯಕರ ಉಪಾಹಾರ, ಊಟೋಪಚಾರದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
ಎಚ್.ಡಿ.ದೇವೇಗೌಡ: 90ರ ಹರೆಯದ ಎಚ್.ಡಿ.ದೇವೇಗೌಡರು ಆಹಾರ ಸೇವನೆಯಲ್ಲಿ ಕೆಲ ಕಟ್ಟುಪಾಡು ಪಾಲಿಸಿಕೊಂಡು ಬಂದಿದ್ದಾರೆ. ಬೆಳಗ್ಗೆ ಉಪ್ಪಿಟ್ಟು ಸೇರಿ ಲಘು ಉಪಾಹಾರ ಸೇವಿಸುವ ರೂಢಿಯಿರುವ ದೇವೇಗೌಡರು ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ದೇವಾಲಯ, ಮಠಗಳಲ್ಲೂ ಉಪಾಹಾರ, ಊಟ ಸೇವಿಸುವುದನ್ನು ಮುಂದುವರಿಸಿದ್ದಾರೆ. ಜತೆಗೆ ಸ್ಥಳೀಯ ಮುಖಂಡರ ಮನೆಗಳಲ್ಲಿ ಬಯಸಿದರೆ ಮುದ್ದೆ ಊಟ ಸವಿಯುತ್ತಾರೆ. ರಾತ್ರಿ ಇಚ್ಚಿಸಿದರಷ್ಟೇ ಮಿತಾಹಾರ ಇವೇ ಗಂಜಿ, ಮಜ್ಜಿಗೆ ಸೇವಿಸ ಬಯಸುತ್ತಾರೆ. ಪ್ರಚಾರದ ನಡುವೆ ಸ್ವಲ್ಪ ಪ್ರಮಾಣದಲ್ಲಿ ಫಿಲ್ಟರ್ ಕಾಫಿ ಸವಿಯುತ್ತಾರೆ.
ಬಿ.ಎಸ್. ಯಡಿಯೂರಪ್ಪ: ಬೆಳಗ್ಗೆ 5 ಗಂಟೆಗೆ ಏಳುವ ಅಭ್ಯಾಸ ರೂಢಿಸಿಕೊಂಡಿರುವ ಯಡಿಯೂರಪ್ಪ ಅವರಿಗೆ ಪತ್ರಿಕೆಗಳ ಓದು ನಿತ್ಯದ ಅಭ್ಯಾಸ, ಜತೆಗೆ ವಾಕಿಂಗ್. ಉಪ್ಪಿಟ್ಟು, ದೋಸೆ ಯಡಿಯೂರಪ್ಪನವರಿಗೆ ಅಚ್ಚುಮೆಚ್ಚಿನ ಉಪಾಹಾರವೆನಿಸಿದ್ದು, ದಿನದಲ್ಲಿ ಈ ಎರಡರ ಪೈಕಿ ಒಂದು ಇರಲೇಬೇಕು. ಬೆಳಗ್ಗೆ ಲಘು ಉಪಾಹಾರ, ಬಯಸಿದರೆ ಸ್ವಲ್ಪ ಟೀ ಸೇವನೆ. ಪ್ರಚಾರದಲ್ಲಿ ತೊಡಗಿದ್ದಾಗ ಜ್ಯೂಸ್, ಮಜ್ಜಿಗೆ ಸೇವನೆ. ಆಗಾಗ್ಗೆ ಅಲ್ಪ ಪ್ರಮಾಣದಲ್ಲಿ ಡೈ ಫ್ರೂಟ್ಸ್ ಕೂಡ ತೆಗೆದುಕೊಳ್ಳುತ್ತಾರೆ. ಮಧ್ಯಾಹ್ನ ಚಪಾತಿ, ಅನ್ನ- ಸಾಂಬಾರ್, ಪಲ್ಯ, ಮೊಸರು ಸೇವನೆ, ಸಂಜೆ 7- 7.30ರೊಳಗೆ ಅವಲಕ್ಕಿ ಇಲ್ಲವೇ ಅಲ್ಲ ಪ್ರಮಾಣದಲ್ಲಿ ಚಪಾತಿ, ಅನ್ನ, ಸಾಂಬಾರ್, ಮಲಗುವ ಮುನ್ನ ಹಾಲು ಸೇವನೆ.
ಮಲ್ಲಿಕಾರ್ಜುನ ಖರ್ಗೆ: ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಪ್ರಚಾರದ ವೇಳೆ ಹೆಚ್ಚಿನ ಪಥ್ಯ, ಡಯಟ್ ಪಾಲನೆ ಮಾಡುವುದು ಕಡಿಮೆ. ಪೂರ್ವ ನಿಗದಿತ ಪ್ರವಾಸದ ಅನ್ವಯ ಜಿಲ್ಲಾ ಕಾಂಗ್ರೆಸ್ ಸಮಿತಿಯೇ ಊಟ, ವಿಶ್ರಾಂತಿಗೆ ವ್ಯವಸ್ಥೆ ಮಾಡಿರುತ್ತದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ತಮ್ಮ ದೈನಂದಿನ ಪದ್ಧತಿಯಂತೆ ಬಹುಪಾಲು ಇದೆಯಂತೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಹಣ್ಣು ಹಂಪಲು, ಮಜ್ಜಿಗೆ, ಎಳನೀರು ಹೆಚ್ಚಾಗಿ ಬಳಸುತ್ತಾರೆ
ಸಿದ್ದರಾಮಯ್ಯ: ಚುನಾವಣೆ ಘೋಷಣೆಗೂ ಮೊದಲೇ ಮಾಂಸಾಹಾರ ತ್ಯಜಿಸಿರುವ ಸಿದ್ದರಾಮಯ್ಯನವರು ಮತದಾನ ಮುಗಿದು ಫಲಿತಾಂಶ ಬರುವವರೆಗೆ ಇದೇ ಪಥ್ಯ ಮುಂದುವರಿಸಲಿದ್ದಾರೆ. ಉಪ್ಪು, ಸಿಹಿ, ಖಾರದ ತಿಂಡಿ ತಿನಿಸುಗಳಿಂದ ಸಿದ್ದರಾಮಯ್ಯ ಅಂತರ ಕಾಯ್ದುಕೊಳ್ಳುವುದೇ ಹೆಚ್ಚು. ಮುದ್ದೆ ಸಾಂಬಾರು, ಸಿರಿಧಾನ್ಯ ರೊಟ್ಟಿ, ದೋಸೆ, ಪಲ್ಯ, ತರಕಾರಿ ಅವರ ಆಹಾರದಲ್ಲಿ ಪ್ರಧಾನವಾಗಿರುತ್ತವೆ. ಪ್ರಚಾರದ ನಡುವೆ ಎಳನೀರು, ಮಜ್ಜಿಗೆಯನ್ನು ನಿಯಮಿತವಾಗಿ ಸೇವಿಸುತ್ತಾರೆ.
ಬಸವರಾಜ್ ಬೊಮ್ಮಾಯಿ: ರಾಜ್ಯಾದ್ಯಂತ ಬಿರುಸಿನ ರೋಡ್ ಶೋ, ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೇಸಿಗೆಯಲ್ಲಿನ ಪ್ರಚಾರಕ್ಕಾಗಿ ತಮ್ಮ ಆಹಾರ ಸೇವನೆಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ. ಬೆಳಗಿನ ಉಪಾಹಾರಕ್ಕೆ ಇಡ್ಲಿ, ಉಪ್ಪಿಟ್ಟು, ದೋಸೆ ಯಾವುದಾದರೂ ತಿಂಡಿ. ಪ್ರಯಾಣ ಅವಧಿಯಲ್ಲಿ ಸೌತೇಕಾಯಿ ಸೇರಿ ತರಕಾರಿ ಜತೆಗೆ ಆಯ್ದ ಕುರುಕಲು ತಿಂಡಿ ಸೇವಿಸುವ ಅಭ್ಯಾಸವಿದೆ. ಮಧ್ಯಾಹ್ನ ರೊಟ್ಟಿ, ನವಣೆ ಅನ್ನ, ಸಾಂಬಾರು ಸೇವಿಸುತ್ತಾರೆ. ಸಂಜೆ ಸಮಯವಿದ್ದರೆ ಚುರುಮುರಿ ಸೇವಿಸಲು ಬಯಸುತ್ತಾರೆ. ರಾತ್ರಿ ರೊಟ್ಟಿ ಊಟ.
ಕುಮಾರಸ್ವಾಮಿ: ರಾಜ್ಯಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡ ಎಚ್ಡಿ ಕುಮಾರಸ್ವಾಮಿ ಅವರು ಊಟೋಪಚಾರದಲ್ಲಿ ಹೆಚ್ಚಿನ ಪಥ್ಯವನ್ನೇನೂ ಪಾಲಿಸುತ್ತಿಲ್ಲ. ಆದರೆ, ಮಾಂಸಾಹಾರ ಸೇವನೆಯನ್ನು ಸದ್ಯಕ್ಕೆ ತ್ಯಜಿಸಿದ್ದಾರೆ. ಉಳಿದಂತೆ ನಿತ್ಯದ ಅಭ್ಯಾಸದಂತೆ ಬೆಳಗಿನ ಉಪಾಹಾರಕ್ಕೆ ಇಡ್ಲಿ, ರಾಗಿ ರೊಟ್ಟಿ ಇತರೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ, ಸಾಂಬಾರು ಸೇವಿಸುತ್ತಾರೆ. ಪ್ರಚಾರದ ನಡುವೆ ಹೆಣ್ಣು, ಸೊಪ್ಪಿನ ಪಲ್ಯ, ಬೇಯಿಸಿದ ತರಕಾರಿ ಸೇವಿಸುತ್ತಾರೆ. ಸಾಧ್ಯವಿರುವ ಕಡೆಯೆಲ್ಲಾ ಕಾಫಿ ಸೇವನೆಯಿಂದ ಕುಮಾರಸ್ವಾಮಿಯವರ ಎನರ್ಜಿ ಹೆಚ್ಚಿಸುತ್ತದೆಯಂತೆ.
ಡಿ.ಕೆ.ಶಿವಕುಮಾರ್: ಪ್ರಚಾರದ ವೇಳೆ ಡಿ.ಕೆ.ಶಿವಕುಮಾರ್ ಡಯಟ್ಗೆ ಹೆಚ್ಚಿನ ಆದ್ಯತೆ ನೀಡಿದಂತೆ ಕಂಡಿಲ್ಲ, ಬೆಳಗ್ಗೆ ಒಳ್ಳೆಯ ಉಪಾಹಾರ ಸೇವಿಸುವ ಡಿಕೆಶಿ ಪ್ರಚಾರದ ಮಧ್ಯೆ ಎಳನೀರು, ಮಜ್ಜಿಗೆ, ಜ್ಯೂಸ್ ಸೇವಿಸಿವುದು ರೂಢಿಸಿಕೊಂಡಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಸ್ಥಳೀಯ ನಾಯಕರು, ಮುಖಂಡರ ಮನೆಯಲ್ಲಿ ಊಟೋಪಚಾರ ಸೇವಿಸುತ್ತಾರೆ. ಪ್ರಚಾರ ಮಾರ್ಗದಲ್ಲೇ ಸಣ್ಣ ಹೋಟೆಲ್ಗಳಲ್ಲಿ ಮುಖಂಡರು, ಕಾರ್ಯಕರ್ತರೊಂದಿಗೆ ತಿಂಡಿ- ತಿನಿಸು ಸೇವಿಸಿ ಹುರಿದುಂಬಿಸುವುದನ್ನು ಕಾಣಬಹುದು.
ಆರ್. ಅಶೋಕ್: ಪದ್ಮನಾಭನಗರ, ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್ ಅಶೋಕ್ ಅವರು ಉಭಯ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಯಿಂದ ಚುನಾವಣೆ ಮುಗಿಯುವವರೆಗೆ ಆರ್ ಅಶೋಕ್ ಮಾಂಸಾಹಾರ ಸೇವನೆ ತ್ಯಜಿಸಿದ್ದಾರೆ. ಬೆಳಗ್ಗೆ ಉಪಾಹಾರಕ್ಕೆ ಕುಚಲಕ್ಕಿ ಅನ್ನ- ಮಜ್ಜಿಗೆ ಜತೆಗೆ ಜ್ಯೂಸ್, ಮಧ್ಯಾಹ್ನದ ಊಟಕ್ಕೆ ಬೇಯಿಸಿದ ತರಕಾರಿ ಸೇವನೆ. ಸ್ಥಳೀಯ ಮುಖಂಡರು, ಕಾರ್ಯಕರ್ತರ ಒತ್ತಾಯವಿದ್ದ ಕಡೆ ಮುದ್ದೆ, ಅನ್ನ ಸಾಂಬಾರ್ ಸೇವನೆ. ರಾತ್ರಿ ಕುಚಲಕ್ಕಿ ದೋಸೆ, ಪಲ್ಯ ಸೇವನೆ, ಪ್ರಚಾರದ ಮಧ್ಯದಲ್ಲಿ ಯಾವುದೇ ಗ್ರಾಮಕ್ಕೆ ತೆರಳಿದರೂ ಎಳನೀರು ಸೇವಿಸಲು ಬಯಸುತ್ತಾರೆ. ಜತೆಗೆ ಮಜ್ಜಿಗೆಗೂ ಆದ್ಯತೆ. ಲಭ್ಯವಿದ್ದ ಕಡೆ ಬ್ಲಾಕ್ ಕಾಫಿ ಸೇವನೆ ಅವರ ಉತ್ಸಾಹ ಹೆಚ್ಚಿಸಲು ನೆರವಾಗುತ್ತದೆಯಂತೆ.