ನವದೆಹಲಿ : ವೃದ್ಧರೊಬ್ಬರ ಮನೆಗೆ ಕಳ್ಳತನಕ್ಕೆಂದು ಬಂದು ಯೋಗ್ಯವಾದ ವಸ್ತು ಏನೂ ಸಿಗದಿದ್ದಾಗ ಕಳ್ಳರು (Thieves) 500 ರೂ. ಬಿಟ್ಟು ಹೋಗಿರುವ ವಿಚಿತ್ರ ಘಟನೆ ನವದೆಹಲಿಯ (New Delhi) ರೋಹಿಣಿಯ ಸೆಕ್ಟರ್ 8ರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಜುಲೈ 20ರಂದು ಮಧ್ಯರಾತ್ರಿ ನಡೆದಿದೆ. 80 ವರ್ಷದ ನಿವೃತ್ತ ಎಂಜಿನಿಯರ್ ಎಂ ರಾಮಕೃಷ್ಣ ಜುಲೈ 19ರಂದು ತಮ್ಮ ಪತ್ನಿಯೊಂದಿಗೆ ತಮ್ಮ ಮಗನನ್ನು ಭೇಟಿಯಾಗಲು ಗುರುಗ್ರಾಮಕ್ಕೆ ತೆರಳಿದ್ದರು. ಜುಲೈ 21ರಂದು ರಾಮಕೃಷ್ಣ ಅವರ ನೆರೆಹೊರೆಯವರು ಕರೆ ಮಾಡಿ, ತಮ್ಮ ಮನೆಗೆ ಕಳ್ಳರು ನುಗ್ಗಿದ್ದಾಗಿ ಮಾಹಿತಿ ನೀಡಿದ್ದಾರೆ.
ತಕ್ಷಣ ಅವರು ತಮ್ಮ ಮನೆಗೆ ಧಾವಿಸಿದ್ದು, ಮುಖ್ಯ ಗೇಟ್ನ ಬೀಗ ಒಡೆದಿರುವುದು ಕಂಡುಬಂದಿದೆ. ಆದರೆ ಮನೆ ಒಳಗಡೆ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಅವರಿಗೆ ಗೇಟ್ ಬಳಿ 500 ರೂ. ನೋಟ್ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ರಾಮಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಇಟ್ಟಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಎನೂ ಸಿಗದ ಹಿನ್ನೆಲೆ ಕಳ್ಳರೇ 500 ರೂ. ಇಟ್ಟು ಹೋಗಿರಬಹುದು ಎಂದು ಅವರು ಶಂಕಿಸಿದ್ದಾರೆ. ಇದೀಗ ರಾಮಕೃಷ್ಣ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡಸಂಹಿತೆಯ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ತಿಮ್ಮಪ್ಪನ ಖಾತೆಯಲ್ಲಿ ಕೋಟಿ ಕೋಟಿ ಹಣ -ಟಿಟಿಡಿಯಿಂದ ಬಹಿರಂಗ