ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯ ರಾಜಧಾನಿಯನ್ನೇ ನಡುಗಿಸುವ ಕೆಲಸ ನಡೆದಿದೆ. ಉಗ್ರರ ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು (Suspected Terrorists) ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಸಿಸಿಬಿ ಬಂಧಿಸಿದೆ.
ಆರ್ ಟಿ ನಗರ ಕೊಲೆ ಕೇಸ್ನ ಅರೋಪಿಗಳು ಜೈಲಿನಲ್ಲಿ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾರೆ. ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದರು. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಒಗ್ಗೂಡಿಸುತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ, ಸಿಸಿಬಿ ಮಾಹಿತಿ ಸಂಗ್ರಹ ಮಾಡಿತ್ತು. ಮಾಹಿತಿ ಅನ್ವಯ ಸಿಸಿಬಿ ಜೊತೆಗೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದೆ.
ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿರುವ ಸುಲ್ತಾನ್ ಪಾಳ್ಯದ ಕನಕ ನಗರದ ಮಸೀದಿ ಬಳಿ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರ ಬಳಿ ಇದ್ದ 7 ಪಿಸ್ತೂಲ್, ಮದ್ದುಗುಂಡುಗಳು, 2 ಡ್ಯಾಗರ್, ಅಮೋನಿಯಾ, 2 ಸ್ಯಾಟ್ಲೈಟ್ ಫೋನ್, 4 ವಾಕಿಟಾಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಯುಎಪಿಎ, ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆ ಸೇರಿ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.