ಭಾರತ ಮತ್ತು ಪಾಕಿಸ್ತಾನ (India Vs Pakistan) ಇತ್ತಂಡಗಳ ನಡುವಿನ ಪಂದ್ಯವು ಯಾವಾಗಲೂ ರೋಚಕತೆಯಿಂದ ಕೂಡಿರುತ್ತದೆ. ಆದ್ರೆ ಈವರೆಗೆ ನಡೆದಿರುವ ಪಂದ್ಯಗಳಲ್ಲಿ ಭಾರತವೇ ಪಾಕ್ ವಿರುದ್ಧ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಹಲವು ದಿಗ್ಗಜರು ಸ್ಮರಣೀಯ ದಾಖಲೆಗಳನ್ನ ನಿರ್ಮಿಸಿದ್ದಾರೆ. ಅವುಗಳಲ್ಲಿ ಟಾಪ್-5 ಬ್ಯಾಟ್ಸ್ಮ್ಯಾನ್ಗಳ ಪಟ್ಟಿ ಇಲ್ಲಿದೆ.
ನವಜೋತ್ ಸಿಂಗ್ ಸಿಧು:
1996ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ನವಜೋತ್ ಸಿಂಗ್ ಸಿಧು 11 ಬೌಂಡರಿಗಳ ನೆರವಿನೊಂದಿಗೆ 115 ಎಸೆತಗಳಲ್ಲಿ 93 ರನ್ ಚಚ್ಚಿದ್ದರು. ಇದರ ಪರಿಣಾಮ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ ಟೀಂ ಇಂಡಿಯಾ ಪಾಕ್ ವಿರುದ್ಧ 39 ರನ್ಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಶತಕ ವಂಚಿತ ಸಚಿನ್:
2003ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಟೀಂ ಇಂಡಿಯಾಕ್ಕೆ 274 ರನ್ಗಳ ಗುರಿ ನೀಡಿತ್ತು. ಈ ವೇಳೆ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಡಿದ್ದ ಸಚಿನ್ ತೆಂಡೂಲ್ಕರ್ 75 ಎಸೆತಗಳಲ್ಲಿ 98 ರನ್ (12 ಬೌಂಡರಿ, 1 ಸಿಕ್ಸರ್) ಚಚ್ಚಿ ಟೀಂ ಇಂಡಿಯಾ ಗೆಲುವಿಗೆ ನೆರವಾಗಿದ್ದರು. ಪಾಕಿಸ್ತಾನ ನೀಡಿದ್ದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ 45.4 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 276 ರನ್ ಬಾರಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಮ್ಯಾಜಿಕ್ ಮಹಿಯ ಅಬ್ಬರ:
2005ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತ ತಂಡ ತವರಿನಲ್ಲೇ ಪಾಕಿಸ್ತಾನವನ್ನ ಬಗ್ಗುಬಡಿದಿತ್ತು. 2005ರ ಏಪ್ರಿಲ್ 5ರಂದು ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ಎಂ.ಎಸ್ ಧೋನಿ (MS Dhoni) 123 ಎಸೆತಗಳಲ್ಲಿ ಭರ್ಜರಿ 148 ರನ್ ಸಿಡಿಸಿದ್ದರು. ಇದರ ಪರಿಣಾಮ ಭಾರತಕ್ಕೆ 58 ರನ್ಗಳ ಜಯ ಸಿಕ್ಕಿತ್ತು.
ಚೇಸ್ ಮಾಸ್ಟರ್ ಕೊಹ್ಲಿ ಶತಕದಾಟ:
2012ರಲ್ಲಿ ಮಣಿಪುರದಲ್ಲಿ ನಡೆದ ಏಕದಿನ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 330 ರನ್ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಆದ್ರೆ ವಿರಾಟ್ ಕೊಹ್ಲಿ ಅವರ ಶತಕದ ಅಬ್ಬರಕ್ಕೆ ಭಾರತ 47.5 ಓವರ್ಗಳಲ್ಲೇ 330 ರನ್ಗಳ ಗುರಿ ತಲುಪಿತ್ತು. ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ರನ್ ಪೂರೈಸಿ 6 ವಿಕೆಟ್ಗಳ ಜಯ ಸಾಧಿಸಿತ್ತು. ಇದು ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರ ಗರಿಷ್ಠ ಸ್ಕೋರ್ ಆಗಿದೆ.
ಹಿಟ್ ಮ್ಯಾನ್ ಬ್ಯಾಟಿಂಗ್ ಕಮಾಲ್:
2019ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 113 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ಗಳೊಂದಿಗೆ 140 ರನ್ ಚಚ್ಚಿದ್ದರು. ಇದು ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಪಾಕ್ ವಿರುದ್ಧ ಸಿಡಿಸಿರುವ ಗರಿಷ್ಠ ಸ್ಕೋರ್ ಕೂಡ ಆಗಿದೆ. ಅಂದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು. ಆದ್ರೆ ಮಳೆ ಅಡ್ಡಿಯಾಗಿದ್ದರಿಂದ ಪಾಕಿಸ್ತಾನಕ್ಕೆ 40 ಓವರ್ಗಳಲ್ಲಿ 301 ರನ್ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ 40 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಲಷ್ಟೇ ಸಾಧ್ಯವಾಗಿ ಭಾರತದ ಎದುರು ಮಂಡಿಯೂರಿತು.