ಮದುವೆಯಾದ 11 ವರ್ಷದ ಬಳಿಕ ರಾಮ್ ಚರಣ್ ಹಾಗೂ ಉಪಾಸನ ದಂಪತಿ ಪೋಷಕರಾಗಿದ್ದಾರೆ. ಇತ್ತೀಚೆಗೆ ಉಪಾಸನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದಾರೆ. ಮಗುವಿನ ಈ ಹೆಸರಿಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದೀಗ ಮಗುವಿಗೆ ಈ ಹೆಸರಿಟ್ಟಿದ್ದು ಯಾರು ಎಂಬುದು ರಿವೀಲ್ ಆಗಿದೆ.
ರಾಮ್ ಚರಣ್ ಹಾಗೂ ಉಪಾಸನಾ ಮಗಳಿಗೆ ಕ್ಲಿಂಕರ ಎಂದು ಹೆಸರಿಟ್ಟಿರುವುದು ಉಪಾಸನಾರ ತಾಯಿ ಶೋಭನಾ ಕಾಮಿನೇನಿ. ಜನಪ್ರಿಯ ಉದ್ಯಮಿಯಾಗಿರುವ ಶೋಭನಾ ಕಾಮಿನೇನಿ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ”ಉಪಾಸನಾ, ನೀನು ಜನಿಸಿದಾಗ ನಿನಗೆ ಕ್ಲಿಂಕಾರ ಎಂದು ಹೆಸರು ಇಡಬೇಕು ಎಂದುಕೊಂಡಿದ್ದೆ ಆದರೆ ಆಗ ಸಾಧ್ಯವಾಗಿರಲಿಲ್ಲ. ರಾಮ್ ಚರಣ್ ಹಾಗೂ ಉಪಾಸನಾ ನಿಮಗೆ ಅಭಿನಂದನೆಗಳು, ನಿಮಗೆ ಸೂಕ್ತವಾದ ಮಗು ನಿಮ್ಮ ಪ್ರೇಮದಿಂದ ಲಭಿಸಿದೆ. ಆ ಮಗು ನಮ್ಮ ಭವಿಷ್ಯದ ರೂಪಾಂತರದ ಶಕ್ತಿಯಾಗಿದೆ. ನಾವು ನಿನ್ನನ್ನು ಪ್ರೀತಿಸುತ್ತೇವೆ ಕ್ಲಿಂಕಾರಾ” ಎಂದು ಬರೆದುಕೊಂಡಿದ್ದು ತೊಟ್ಟಿಲು ಶಾಸ್ತ್ರದ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಾಯಿಯ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಉಪಾಸನಾ ಧನ್ಯವಾದ ಅಮ್ಮ ಎಂದು ಬರೆದುಕೊಂಡಿದ್ದಾರೆ.
ಜೂನ್ 30 ರಂದು ಉಪಾಸನಾರ ತವರು ಮನೆಯಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಕಾರ್ಯಕ್ರಮದಲ್ಲಿ ರಾಮ್ ಚರಣ್ ತಂದೆ ತಾಯಿಯಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸುರೇಖಾ ಕೋನಿಡೆಲಾ, ಉಪಾಸನಾ ಪೋಷಕರು ಹಾಗೂ ಇನ್ನೂ ಕೆಲ ಆಪ್ತರು ಭಾಗವಹಿಸಿದ್ದರು.