ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸ್ಟಾರ್ ನಟ, ನಟಿಯರನ್ನು ತಮ್ಮ ಪರ ಪ್ರಚಾರ ನಡೆಸುವಂತೆ ಮನವಿ ಮಾಡುತ್ತಿದ್ದಾರೆ. ಅದರಂತೆ ಈ ಭಾರಿ ಸುದೀಪ್ ಚುನಾವಣಾ ಪ್ರಚಾರದಲ್ಲಿ ಇರಲಿದ್ದಾರಾ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇದಕ್ಕೆ ಸುದೀಪ್ ಉತ್ತರಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸುದೀಪ್ ಅಬ್ಬರದ ಪ್ರಚಾರ ಮಾಡಿದ್ದರು. ಸುದೀಪ್, ಬಿಜೆಪಿ ಪರವಾಗಿ ಅಖಾಡಕ್ಕೆ ಇಳಿದಿದ್ದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಬಿಜೆಪಿಗೆ ಕಿಚ್ಚ ಸುದೀಪ್ ಪ್ರಚಾರ ಹೆಚ್ಚಿನ ಸಹಾಯ ಮಾಡಲಿಲ್ಲ. ಇದೀಗ ಲೋಕಸಭೆ ಚುನಾವಣೆ ಬಂದಿದ್ದು, ಈ ಬಾರಿ ಸುದೀಪ್ ಯಾವ ಅಭ್ಯರ್ಥಿ ಪರ ಅಥವಾ ಪಕ್ಷದ ಪರವಾಗಿ ಚುನಾವಣೆ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಇದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
‘ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ. ಕೇಳಿದಾಗ ಆ ಬಗ್ಗೆ ನಿರ್ಣಯ ಮಾಡುತ್ತೇನೆ’ ಎಂದಿದ್ದಾರೆ. ಮುಂದುವರೆದು, ‘ಸಿನಿಮಾ ಬಿಟ್ಟು ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಈಗಾಗಲೇ ಅಭಿಮಾನಿಗಳು, ಗೆಳೆಯರು ಗಲಾಟೆ ಮಾಡುತ್ತಿದ್ದಾರೆ. ಇಂಥಹಾ ಹೊತ್ತಿನಲ್ಲಿ. ಶೂಟಿಂಗ್ ಬಿಟ್ಟು ರಾಜಕೀಯ ಪ್ರಚಾರಕ್ಕೆ ಹೋದರೆ ಇನ್ನಷ್ಟು ಗಲಾಟೆಗಳಾಗುತ್ತವೆಯೋ ಏನೋ’ ಎಂದು ತಮಾಷೆ ಮಾಡಿದರು.
ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಎಂಬ ಪ್ರಶ್ನೆಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ ಸುದೀಪ್, ‘ನೋಡಿ ಈಗ ನಾನು ಹೋಟೆಲ್ ಉದ್ಘಾಟನೆಗೆ ಬರಲ್ಲ ಅಂದುಕೊಂಡಿದ್ದರು ಆದರೆ ಬಂದಿದ್ದೇನೆ. ಹಾಗೆಯೇ ರಾಜಕೀಯದ್ದು ಏನಾಗುತ್ತದೆಯೋ ನೋಡೋಣ. ಎಲ್ಲರೂ ಬರೊಲ್ಲ ಅಂದುಕೊಂಡಿದ್ದಾರೆ, ಬಂದಾಗ ಗೊತ್ತಾಗುತ್ತದೆ. ಒಂದೊಮ್ಮೆ ಬರಲಿಲ್ಲ ಎಂದರೆ ಬರಲಿಲ್ಲ ಅಷ್ಟೆ’ ಎಂದು ರಾಜಕೀಯದ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.