ಕಾಳುಗಳಲ್ಲಿ ಒಂದು ಬಗೆಯ ಸಂಕೀರ್ಣ ಸಕ್ಕರೆ ಅಂಶಗಳಿರುತ್ತವೆ. ಆಲಿಗೋಸಾಕರೈಡ್ಸ್ ಎಂದು ಅವುಗಳನ್ನು ಕರೆಯಲಾಗುತ್ತದೆ. ಬಹುಪಾಲು ಜನರಿಗೆ ಈ ಸಕ್ಕರೆಯಂಶ ವಿಘಟನೆಯಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿಯೇ ಕಾಳುಗಳನ್ನು ತಿಂದಾಗ ಹೊಟ್ಟೆ ಉಬ್ಬರಿಸಿ, ಗ್ಯಾಸ್ ಸಮಸ್ಯೆ ಆಗುವುದು. ಹಾಗಾಗಿ ಕಾಳುಗಳನ್ನು ಚೆನ್ನಾಗಿ ನೆನೆಸುವುದರಿಂದ ಅವುಗಳಲ್ಲಿರುವ ಈ ಸಕ್ಕರೆಯಂಶವನ್ನು ಕಡಿಮೆ ಮಾಡಬಹುದು. ನೆನೆದು ಉಳಿದ ಅಂಶವನ್ನೂ ವಿಘಟನೆ ಮಾಡಲು ಅನುಕೂಲವಾಗುತ್ತದೆ ದೇಹಕ್ಕೆ.
ಇಂಧನ ಉಳಿತಾಯ
ದೀರ್ಘ ಸಮಯ ಕಾಳುಗಳನ್ನು ನೆನೆಸುವುದರಿಂದ ಶೀಘ್ರ ಬೇಯುತ್ತವೆ ಅವು. ಈ ಮೂಲಕ ಇಂಧನವನ್ನು ಉಳಿಸಬಹುದು. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದನ್ನೂ ತಪ್ಪಿಸಬಹುದು. ಅದರಲ್ಲೂ ಬರೀ ನೀರಿನಲ್ಲಿ ಕಾಳುಗಳನ್ನು ನೆನೆಸುವುದಕ್ಕಿಂತ, ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ನೆನೆಸುವುದು ಹೆಚ್ಚು ಪ್ರಯೋಜನಕಾರಿ.
ಕಾಳುಗಳಲ್ಲಿ ಇರುವ ಅಂಶಗಳೆಲ್ಲ ಅದರ ಗಿಡಕ್ಕೆ ಪೂರಕವಾದಂಥವು. ಹಾಗಾಗಿ ಕೆಲವು ಅಂಶಗಳು ಮಾನವ ದೇಹಕ್ಕೆ ಬೇಡದಂಥವೂ ಇರಬಹುದು. ಉದಾ, ಕಿಡ್ನಿ ಬೀನ್ಗಳಲ್ಲಿರುವ ಲೆಕ್ಟಿನ್ ಅಂಶವು ನಮಗೆ ಬೇಡ. ಹಾಗಾಗಿ ಈ ಕಾಳುಗಳನ್ನು ಸಾಕಷ್ಟು ಸಮಯ ನೆನೆಸಿ, ಅದರ ನೀರು ಬದಲಾಯಿಸಿ ಬೇಯಿಸಿದರೆ ಮಾತ್ರ ಲೆಕ್ಟಿನ್ ಅಂಶವನ್ನು ತೆಗೆಯಬಹುದು. ಇಂಥವೇ ಇನ್ನೂ ಕೆಲವು ಟಾಕ್ಸಿನ್ಗಳು ಕಾಳುಗಳಲ್ಲಿರುತ್ತವೆ.
ನೆನೆದ ಕಾಳುಗಳು ಬೇಯುವುದಕ್ಕೆ ಅನುಕೂಲವಷ್ಟೇ ಅಲ್ಲ, ಸತ್ವಗಳನ್ನು ಹೀರಿಕೊಳ್ಳಲೂ ಸುಲಭದ ತುತ್ತಾಗುತ್ತವೆ. ಕೆಲವು ಖನಿಜಗಳನ್ನು ಹೀರಿಕೊಳ್ಳುವುದಕ್ಕೆ ಅದೇ ಆಹಾರದಲ್ಲಿರುವ ಕೆಲವು ಅಂಶಗಳು ಅಡ್ಡಿ ಮಾಡುತ್ತವೆ. ಉದಾ, ಕಾಳುಗಳಲ್ಲಿರುವ ಫೈಟಿಕ್ ಆಮ್ಲವು ಕಬ್ಬಿಣ, ಸತು, ಕ್ಯಾಲ್ಶಿಯಂನಂಥ ಖನಿಜಗಳನ್ನು ಹೀರಿಕೊಳ್ಳಲು ತಡೆ ಮಾಡುತ್ತದೆ. ಆದರೆ ಕಾಳುಗಳನ್ನು ಹೆಚ್ಚು ಸಮಯ ನೆನೆಸುವುದರಿಂದ ಫೈಟಿಕ್ ಆಮ್ಲದ ಸಾಂದ್ರತೆಯನ್ನು ಕಡಿಮೆ ಮಾಡಬಹುದು.
ನೆನೆಸುವುದು ಹೇಗೆ?
ಕಾಳುಗಳನ್ನು ನೀರಿಗೆ ಹಾಕುವುದೇನು ಬ್ರಹ್ಮ ವಿದ್ಯೆಯೇ ಎಂದು ನಗಬೇಡಿ. ಕೆಲವೊಮ್ಮೆ ಅದರಲ್ಲೂ ತಪ್ಪಾಗುತ್ತದೆ. ಮೊದಲಿಗೆ ಕಾಳುಗಳನ್ನು ಚೆನ್ನಾಗಿ ತೊಳೆದ ಮೇಲೆ, ಅಗಲ ಬಾಯಿಯ ಪಾತ್ರೆಗೆ ಹಾಕಿ, ಅದರ ಮೇಲೆ ಮೂರಿಂಚು ನೀರು ನಿಲ್ಲುವಷ್ಟು ನೆನೆಸಿ. ಚಿಟಿಕೆ ಉಪ್ಪು ಹಾಕಿ. ಹಾಗಲ್ಲದಿದ್ದರೆ, ಮೂರು ಕಪ್ ಕಾಳುಗಳಿಗೆ 10 ಕಪ್ನಷ್ಟು ನೀರು ಹಾಕಿ. ಇದೀಗ 8 ತಾಸುಗಳ ಕಾಲ ಅಥವಾ ಅಹೋರಾತ್ರಿ ನೆನೆಯಲಿ. ಇದನ್ನು ಬೇಯಿಸುವಾಗ, ನೆನೆಸಿದ ನೀರನ್ನು ಅವಶ್ಯವಾಗಿ ತೆಗೆದು ಬೇರೆ ನೀರಲ್ಲೇ ಬೇಯಿಸಿ. ನೆನೆಸಿದ ನೀರಲ್ಲಿ ಟಾಕ್ಸಿನ್ಗಳು ಕರಗಿರುವುದರಿಂದ, ನಮಗದು ಬೇಡ. ಆದರೆ ಬೇಯಿಸಿದ ಕಾಳು-ಬೇಳೆಗಳ ಕಟ್ಟನ್ನು ಮಾತ್ರ ಎಂದಿಗೂ ಬಿಸಾಡಬೇಡಿ. ಒಂದೊಮ್ಮೆ ರಾತ್ರಿಡೀ ನೆನೆಸುವಷ್ಟು ಸಮಯವಿಲ್ಲ, ತುರ್ತಾಗಿ ಅದನ್ನು ಅಡುಗೆಗೆ ಬಳಸಬೇಕಿದೆ ಎಂದಾದರೆ, ಇನ್ನೊಂದು ಕ್ರಮವಿದೆ. ಒಂದು ಕಪ್ ಕಾಳುಗಳಿಗೆ ಐದು ಕಪ್ನಂತೆ ಕುದಿಯುವ ನೀರು ಹಾಕಿ. ಇದನ್ನು ಭದ್ರವಾಗಿ ಮುಚ್ಚಿಡಿ, ಒಂದೆರಡು ತಾಸಿನ ನಂತರ ಈ ಕಾಳುಗಳು ಚೆನ್ನಾಗಿ ನೆನೆದಿರುತ್ತವೆ. ಅದನ್ನೀಗ ಅಡುಗೆಗೆ ಬಳಸಬಹುದು.