ಸಸ್ಯಾಹಾರಿಯಾಗಿದ್ದು ನನ್ನ ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಮಾಂಸಹಾರ ಸೇವನೆಯಿಂದ ನನ್ನ ದೇಹದಲ್ಲಿ ಸಮಸ್ಯೆ ಉಂಟಾಗುತ್ತಿತ್ತು ಎಂದು ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದರಿಂದಾಗಿ ನನಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ ವೇಳೆ ನನ್ನ ದೇಹದಲ್ಲಿ ಹೆಚ್ಚುವರಿ ಯೂರಿಕ್ ಆಮ್ಲವನ್ನು ಹೊಂದಿದೆ ಎಂದು ಗೊತ್ತಾಯಿತು. ಮುಖ್ಯವಾಗಿ ನನ್ನ ಆಹಾರದಲ್ಲಿ ಹಾಗೂ ನನ್ನ ಹೊಟ್ಟೆಯಲ್ಲಿ ತುಂಬಾ ಆಮ್ಲೀಯತೆಯಿತ್ತು. ನಾನು ಕ್ಯಾಲ್ಸಿಯಂ, ಮೆಗ್ನೀಷಿಯಂ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದರೂ ಸಹ ಆಮ್ಲೀಯತೆಯ ಪ್ರಮಾಣ ಜಾಸ್ತಿಯಿತ್ತು. ಇದರಿಂದ ನನಗೆ ಒಂದು ಟ್ಯಾಬ್ಲೆಟ್ ಸಾಕಾಗುತ್ತಿರಲಿಲ್ಲ. ಅಲ್ಲದೆ ನನ್ನ ಮೂಳೆಗಳೂ ದುರ್ಬಲವಾಗಿದ್ದವು ಎಂದು ಬಹಿರಂಗಪಡಿಸಿದ್ದಾರೆ.
ಈ ಸಮಸ್ಯೆಗಳಿಂದಾಗಿ 2018ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ನಾನು ಮಾಂಸಾಹಾರ ಸೇವನೆಯನ್ನು ತ್ಯಜಿಸಿದೆ. ಮಾಂಸಾಹಾರಿಯಾಗುವುದಕ್ಕಿಂತ ಸಸ್ಯಾಹಾರಿಯಾಗಿರುವುದು ಉತ್ತಮ ಎಂಬುದು ನನ್ನ ಅನಿಸಿಕೆ ಎಂದು ಇದೇ ವೇಳೆ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.