ನಾವೆಲ್ಲ ನಿದ್ದೆ ಮಾಡುವವರೇ ಆದರೂ, ನಮ್ಮಲ್ಲಿ ನಿದ್ದೆ ಸರಿಯಾಗಿ ಬಾರದೆ ಒದ್ದಾಡುವವರದ್ದು ಒಂದು ವರ್ಗ. ನಿದ್ದೆ ಬಂದ ಮೇಲೂ ಒದ್ದಾಡುವವರದ್ದು ಇನ್ನೊಂದು ವರ್ಗ. ಈ ಎರಡನೇ ಸಾಲಿಗೆ ಸೇರಿದವರು, ನಿದ್ದೆ ಬಂದ ಮೇಲೆ ತಾವು ಒದ್ದಾಡುವುದಿಲ್ಲ, ಆಚೀಚಿನವರನ್ನು ಒದ್ದಾಡಿಸುತ್ತಾರೆ- ಗೊರಕೆ ಹೊಡೆಯುವ ಮೂಲಕ.
ಗಂಟಲಿನ ಸ್ನಾಯುಗಳ ಸೆಳೆತದಿಂದ, ಮೂಗಿನ ಹೊಳ್ಳೆಗಳಲ್ಲಿ ಉಂಟಾಗುವ ಅಡಚಣೆ, ದಪ್ಪಗಾದಾಗ ಗಂಟಲಿನ ಭಾಗದಲ್ಲಿ ಕೊಬ್ಬಿನಂಶ ಶೇಖರವಾಗುತ್ತದೆ, ಆಗ ಉಸಿರಾಟದ ಗಾಳಿಯ ಚಲನೆ ನಿಯಮಿತವಾಗಿರುವುದಿಲ್ಲ, ಇದರಿಂದಾಗಿ ಗೊರಕೆ ಉಂಟಾಗುವುದು.
ವಿಶ್ವದೆಲ್ಲೆಡೆಯ ಅಂಕಿ-ಅಂಶಗಳನ್ನು ನೋಡಿದರೆ, ಸುಮಾರು 936 ದಶಲಕ್ಷ ಮಂದಿ ಒಎಸ್ಎ ಹೊಂದಿದವರಿದ್ದಾರೆ. ಇವರಲ್ಲಿ ಹೆಚ್ಚಿನವರ ಲಕ್ಷಣಗಳು ಸೌಮ್ಯವಾದದ್ದು. ಈ ಲಕ್ಷಣಗಳು ತೀವ್ರವಾಗಿ ಇದ್ದವರಲ್ಲಿ, ನಿದ್ದೆಯಲ್ಲಿ ಆಗಾಗ ಉಸಿರುಗಟ್ಟುವುದು, ಕೆಮ್ಮುವುದು, ನಿದ್ದೆಯಿಂದ ಆಗಾಗ ಎಚ್ಚರವಾಗುವುದು, ಬಾತ್ರೂಂ ಓಡಾಟಗಳು, ನಿದ್ದೆಯಲ್ಲಿ ಬೆವರುವುದು ಇತ್ಯಾದಿಗಳು ಸಾಮಾನ್ಯ. ಇದರಿಂದಾಗಿ ಹಗಲಿಗೂ ಇವರು ಸುಸ್ತು, ಆಯಾಸ, ಏಕಾಗ್ರತೆಯ ಕೊರತೆ, ತಲೆನೋವು, ಎದೆ ಉರಿ, ಮೂಡ್ ಬದಲಾವಣೆ, ತೂಕಡಿಕೆಗಳಿಂದ ಮುಕ್ತರಾಗಿ ಇರುವುದಿಲ್ಲ. ಇದನ್ನು ವೈದ್ಯಕೀಯವಾಗಿ ನಿರ್ವಹಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಗಳು ಬರಬಹುದು ಎನ್ನುವುದು ತಜ್ಞರ ಅಭಿಮತ.
ಬ್ರೆಜಿಲ್ ದೇಶದ ಸಾವೊ ಪೌಲೊ ವಿಶ್ವವಿದ್ಯಾಲಯದ ಅಧ್ಯಯನಕಾರರು ಹೇಳುವ ಪ್ರಕಾರ, ಒಂದು ಸರಳವಾದ ರಕ್ತ ಪರೀಕ್ಷೆಯ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು.
ಆದ್ದರಿಂದ ತುಂಬಾ ಗೊರಕೆ ಹೊಡೆಯುತ್ತಿದ್ದು, ನಿಮ್ಮ ಗೊರಕೆಯಿಂದಾಗಿ ಮನೆಯವರ ನಿದ್ದೆ ಹಾಳಾಗಿ ಬೆಳಗ್ಗೆ ಎದ್ದಾಗ ಅವರು ನಿಮ್ಮ ಗೊರಕೆಯ ಬಗ್ಗೆ ದೂರಿದಾಗ, ಈ ಗೊರಕೆ ನಿಲ್ಲಿಸಲು ಏನು ಮಾಡುವುದು ಎಂದು ಯೋಚಿಸುತ್ತಿದ್ದರೆ ಮಲಗುವ ಮುನ್ನ ಈ ಆಹಾರವನ್ನು ಸೇವಿಸಬೇಡಿ.
ಗೋಧಿ
ಸಂಸ್ಕರಿಸಿದ ಗೋಧಿ ಗೊರಕೆ ಸಮಸ್ಯೆ ಇರುವವರಿಗೆ ಅಷ್ಟು ಒಳ್ಳೆಯದಲ್ಲ. ಇದು ರಾತ್ರಿ ಮಲಗಿದಾಗ ಉಸಿರಾಟ ಸರಾಗವಾಗಿ ಓಡಾಡಲು ಅಡಚಣೆ ಉಂಟು ಮಾಡುತ್ತದೆ. ಆದ್ದರಿಂದ ಮಲಗುವ ಮುನ್ನ ಗೋಧಿಯ ಆಹಾರ ತಿನ್ನುವ ಅಭ್ಯಾಸವಿದ್ದರೆ ನಿಮ್ಮ ಈ ಆಹಾರಕ್ರಮವನ್ನು ಬದಲಾಯಿಸಿ. ರಾತ್ರಿ ಸುಖ ನಿದ್ದೆಗೆ ಅನ್ನ ಸಹಕಾರಿ. ಇನ್ನು ತೂಕ ಇಳಿಕೆಗೆ ಅಥವಾ ಮಧುಮೇಹ ನಿಯಂತ್ರಣಕ್ಕೆ ಅನ್ನ ತಿನ್ನದಿದ್ದರೆ ನವಣೆಯಿಂದ ಆಹಾರ ತಯಾರಿಸಿ ತಿನ್ನಿ.
ಸಕ್ಕರೆ
ಸಕ್ಕರೆ ಬಾಯಿಗೆ ಮಾತ್ರ ರುಚಿ, ಆರೋಗ್ಯಕ್ಕೆ ತುಂಬಾನೇ ಕಹಿ. ಸಕ್ಕರೆಯಲ್ಲಿ ಯಾವುದೇ ಆರೋಗ್ಯಕರ ಗುಣವಿಲ್ಲ. ಸಕ್ಕರೆಯನ್ನು ದೂರವಿಟ್ಟಷ್ಟೂ ಆರೋಗ್ಯ ಚೆನ್ನಾಗಿರುತ್ತದೆ, ಇನ್ನು ಸಕ್ಕರೆ ಹಾಕಿರುವ ಸಿಹಿ ಪದಾರ್ಥಗಳ ಸೇವನೆ, ಟೀ, ಕಾಫಿಯಲ್ಲಿ ತುಂಬಾ ಸಕ್ಕರೆ ಹಾಕಿ ಕುಡಿಯುವ ಅಭ್ಯಾಸವಿದ್ದರೆ ಈ ಅಭ್ಯಾಸದಿಂದ ಗೊರಕೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಸಕ್ಕರೆ ಗಂಟಲಿನ ಸ್ನಾಯುಗಳನ್ನು ಹಾಳು ಮಾಡುತ್ತದೆ, ಆದ್ದರಿಂದ ಗೊರಕೆ ತಡೆಯಲು ಸಕ್ಕರೆಯನ್ನು ದೂರವಿಡುವುದು ಒಳ್ಳೆಯದು.
ಅಧಿಕಕೊಬ್ಬಿನಂಶವಿರುವಮಾಂಸಾಹಾರಸೇವನೆ
ಮಾಂಸದಲ್ಲಿ ಅಧಿಕ ಕೊಬ್ಬಿನಂಶ ಹಾಗೂ ಪ್ರೊಟೀನ್ ಇರುತತ್ದೆ, ಇದರಿಂದ ಸ್ಯಾಚುರೇಟಡ್ ಕೊಬ್ಬಿನಂಶ ಅಧಿಕವಾಗುವುದು, ಸ್ಯಾಚುರೇಟಡ್ ಕೊಬ್ಬಿನಂಶ ಅಧಿಕವಾದಾಗ ಗೊರಕೆ ಸಮಸ್ಯೆ ಉಂಟಾಗುವುದು. ಗೊರಕೆ ಸಮಸ್ಯೆ ಇರುವವರು ಕಡಿಮೆ ಕೊಬ್ಬಿನಂಶವಿರುವ ಆಹಾರ ಹಾಗೂ ತೆಳು ಮಾಂಸದ ಆಹಾರ ಸೇವನೆ ಒಳ್ಳೆಯದು.
ಹಾಲಿನಉತ್ಪನ್ನಗಳು
ಮಲಗುವ ಮುನ್ನ ಹಾಲು ಕುಡಿಯುವುದು ಸುಖ ನಿದ್ದೆಗೆ ತುಂಬಾ ಒಳ್ಳೆಯದು, ಆದರೆ ಹಾಲಿನ ಉತ್ಪನ್ನಗಳು ಕೂಡ ಗೊರಕೆಗೆ ಒಂದು ಕಾರಣ. ಹಾಲಿನ ಉತ್ಪನ್ನಗಳು ದೇಹದಲ್ಲಿ ಕಫ ಜಾಸ್ತಿ ಉತ್ಪತ್ತಿ ಮಾಡುತ್ತದೆ, ಇದರಿಂದ ಗೊರಕೆ ಹೆಚ್ಚಾಗುವುದು.
ಮದ್ಯಪಾನ
ಮದ್ಯಪಾನಿಗಳಲ್ಲಿ ಗೊರಕೆ ಸಮಸ್ಯೆ ಸರ್ವೇ ಸಾಮಾನ್ಯ. ಮದ್ಯ ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಇದರಿಂದಾಗಿ ಗೊರಕೆ ಶಬ್ದ ಹೆಚ್ಚಾಗುವುದು.