ಮಳೆಗಾಲವೆಂದರೆ ಸೊಳ್ಳೆಗಳ ಕಾಲವೆಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಬರೀ ಸೊಳ್ಳೆ ಕಚ್ಚುವುದು ಸಮಸ್ಯೆಯಲ್ಲ, ಅದರೊಂದಿಗೆ ಬರುವ ಮಲೇರಿಯ, ಡೆಂಗ್ಯೂ, ಜೀಕಾ ಮುಂತಾದ ವೈರಸ್ಗಳು ಭೀತಿ ಮೂಡಿಸುತ್ತಿವೆ. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೂ, ಮನೆಯೆದುರಿನ ರಸ್ತೆಯಲ್ಲೋ ಚರಂಡಿಯಲ್ಲೋ ನೀರು ನಿಲ್ಲುತ್ತಿದ್ದರೆ ಎಷ್ಟೆಂದು ಒದ್ದಾಡುವುದಕ್ಕೆ ಸಾಧ್ಯ? ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಿದ್ದಾಗಿದೆ, ಆದರೂ ಬಾಗಿಲು ತೆರೆದಾಗ ನಮಗಿಂತ ಮೊದಲು ಸೊಳ್ಳೆಗಳು ನುಗ್ಗುತ್ತವೆ. ರಾತ್ರಿ ಮಲಗುವಾಗಲೂ ಪರದೆಯೊಳಗೇ ಮಲಗುತ್ತೇವೆ, ಹಗಲೆಲ್ಲ ಸೊಳ್ಳೆ ಪರದೆ ಸುತ್ತಿಕೊಂಡು ಓಡಾಡಲು ಸಾಧ್ಯವೇ?
ಈ ಕ್ರಮಗಳೆಲ್ಲ ಒಳ್ಳೆಯದೇ. ಅಗತ್ಯವಾಗಿ ಬೇಕಾಗಿದ್ದು ಸಹ ಹೌದು. ಜೊತೆಗೆ ಕೆಲವು ನೈಸರ್ಗಿಕ ಪರಿಮಳದ ತೈಲಗಳು ಅಥವಾ ರಿಪೆಲ್ಲೆಂಟ್ಗಳನ್ನು ಹಚ್ಚಿಕೊಂಡರೆ, ಸೊಳ್ಳೆಗಳು ಹತ್ತಿರ ಬಾರದಂತೆ ಕಾಪಾಡಿಕೊಳ್ಳಬಹುದು. ಜೊತೆಗೆ, ಮನೆಯ ಸುತ್ತಮುತ್ತ ಕೆಲವು ಒಳಾಂಗಣ/ಹೊರಾಂಗಣದ ಗಿಡಗಳನ್ನು ಬೆಳೆಸುವುದು ಸಹ ಈ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ. ಸೊಳ್ಳೆಗಳನ್ನು ದೂರ ಓಡಿಸುವಂಥ ಗುಣವನ್ನುಳ್ಳ ಐದು ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಬೆಸಿಲ್
ಇದು ಕೇವಲ ಸೊಳ್ಳೆ ಓಡಿಸುವುದಕ್ಕೆ ಮಾತ್ರವಲ್ಲ, ರುಚಿಕಟ್ಟಾದ ಅಡುಗೆಗೂ ಉಪಯೋಗವಾಗುತ್ತದೆ. ಇದರ ತೀಕ್ಷ್ಣವಾದ ಪರಿಮಳವು ಸೊಳ್ಳೆಗಳನ್ನು ಹತ್ತಿರ ಸುಳಿಯಗೊಡುವುದಿಲ್ಲ. ಹಾಗಾಗಿ ಸೊಳ್ಳೆ ಓಡಿಸುವ ಉಪಾಯಗಳಲ್ಲಿ ಇದನ್ನು ಸಹ ಅಳವಡಿಸಿಕೊಳ್ಳಬಹುದು. ಸಾಕಷ್ಟು ಗಾಳಿ-ಬೆಳಕು ಇರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಸಬಹುದು. ಇದರ ಎಲೆಗಳನ್ನು ಕಿವುಚಿ ಮೈ-ಕೈಗೆಲ್ಲ ರಸ ಲೇಪಿಸಿಕೊಂಡರೂ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಇದರ ಕುಂಡಗಳನ್ನು ಸೊಳ್ಳೆಯ ಪ್ರವೇಶ ದ್ವಾರಗಳಲ್ಲಿ ಇರಿಸಿಕೊಂಡರೆ, ಸೊಳ್ಳೆಯ ಉಪಟಳಕ್ಕೆ ಬಾಗಿಲು ತೆರೆಯಲೂ ಅಳುಕುವ ಸ್ಥಿತಿ ತೊಲಗುತ್ತದೆ.
ಲಾವೆಂಡರ್
ಇದರ ಹೂವುಗಳು ನಿಮ್ಮ ಬಾಲ್ಕನಿ ಮತ್ತು ಮನೆಯೊಳಗಿನ ಜಾಗವನ್ನು ಸುಂದರಗೊಳಿಸುವುದು ಮಾತ್ರವಲ್ಲ, ಆಹ್ಲಾದಕರ ಪರಿಮಳವು ಸೊಳ್ಳೆಗಳನ್ನು ದೂರ ಓಡಿಸುತ್ತದೆ. ಇದರ ಘಮ ಮನುಷ್ಯರಿಗೆ ಆಪ್ಯಾಯಮಾನವೇ ಹೊರತು ಸೊಳ್ಳೆ ಅಥವಾ ಇತರ ಕೀಟಗಳಿಗಲ್ಲ. ಬಿಸಿಲು ಬರುವಂಥ ಜಾಗದಲ್ಲಿ ಇದನ್ನು ಕುಂಡಗಳಲ್ಲಿ ಬೆಳೆಯಬಹುದು. ಈ ಹೂವನ್ನು ಒಣಗಿಸಿ ಅದನ್ನು ಪುಟ್ಟ ಸ್ಯಾಶೆಗಳಲ್ಲಿ ತುಂಬಿ ಮನೆಯಲ್ಲೆಲ್ಲಾ ಇರಿಸಿಕೊಳ್ಳಬಹುದು. ಲ್ಯಾವೆಂಡರ್ ತೈಲವನ್ನೂ ಇತರ ಎಣ್ಣೆಯೊಂದಿಗೆ ಸೇರಿಸಿ ಚರ್ಮಕ್ಕೆ ಲೇಪಿಸಿಕೊಳ್ಳಬಹುದು. ಇದನ್ನು ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಹಲವು ರೀತಿಯಲ್ಲಿ ಅನುಕೂಲಗಳಿವೆ.
ಚೆಂಡು ಹೂವು ಎಂದೇ ಇವು ಪ್ರಸಿದ್ಧ. ಮಳೆಗಾಲದ ಈ ಹೊತ್ತಿನಲ್ಲಿ ಮೇಲೇಳುವ ಚೆಂಡು ಹೂವಿನ ಗಿಡಗಳು, ನವರಾತ್ರಿ-ದೀಪಾವಳಿಯ ಆಸುಪಾಸಿನಲ್ಲಿ ಇಡೀ ಗಿಡ ತುಂಬುವಷ್ಟು ಹೂ ಬಿಡುತ್ತವೆ. ಇವೂ ಸಹ ಸೊಳ್ಳೆ ಓಡಿಸುವಲ್ಲಿ ಸಹಕಾರ ನೀಡುವಂಥವು. ಬಾಲ್ಕನಿಯಲ್ಲಿ, ಬಾಗಿಲು-ಕಿಟಕಿಗಳ ಬಳಿ, ಅಂದರೆ ಸೊಳ್ಳೆ ಒಳ ಪ್ರದೇಶ ಮಾಡುವ ಜಾಗಗಳಲ್ಲಿ ಇದನ್ನು ಕುಂಡದಲ್ಲಿ ಇರಿಸಿಕೊಳ್ಳುವುದು ಒಳ್ಳೆಯ ಉಪಾಯ. ಇದರ ಹೂವುಗಳನ್ನು ಗೊಂಚಲು ಮಾಡಿ, ಹೂದಾನಿಗಳಲ್ಲಿ ಮನೆಯೊಳಗೆ ಇರಿಸಿಕೊಳ್ಳಬಹುದು. ಹೂವನ್ನು ಒಣಗಿಸಿಟ್ಟುಕೊಂಡರೆ ಸೊಳ್ಳೆ ಓಡಿಸುವಲ್ಲಿ ಇನ್ನಷ್ಟು ನೆರವು ದೊರೆಯುತ್ತದೆ.
ಲೆಮೆನ್ ಬಾಮ್
ಪುದೀನಾ ಜಾತಿಗೆ ಸೇರಿದ ಸಸ್ಯವಿದು. ಇದರ ಕಟುವಾದ ಘಮ ಸೊಳ್ಳೆ ಓಡಿಸುವಲ್ಲಿ ನೆರವಾಗುತ್ತದೆ. ಯಾವುದೇ ಕೈತೋಟ ಅಥವಾ ಬಾಲ್ಕನಿಗಳಲ್ಲಿ ಇವುಗಳನ್ನು ಸುಲಭವಾಗಿ ಬೆಳೆಯಬಹುದು. ಇದರ ಗಾಢವಾದ ನಿಂಬೆಯಂಥ ಪರಿಮಳ ನಮಗೆ ಹಿತವೆನಿಸಿದರೂ ಸೊಳ್ಳೆಗಳಿಗೆ ಆಗದು. ಮನಸ್ಸನ್ನು ಶಾಂತಗೊಳಿಸುವ ಗುಣಗಳು ಇದಕ್ಕಿರುವುದರಿಂದ, ಈ ಮೂಲಿಕೆಯ ಎಲೆಗಳನ್ನು ಚಹಾ ಮಾಡಿ ಕುಡಿಯುವವರಿದ್ದಾರೆ.
ಸಿಟ್ರೋನೆಲ್ಲ
ಲೆಮೆನ್ಗ್ರಾಸ್, ನಿಂಬೆ ಹುಲ್ಲು ಎಂದೆಲ್ಲಾ ಈ ಗಿಡವನ್ನು/ಹುಲ್ಲನ್ನು ಕರೆಯಲಾಗುತ್ತದೆ. ಸೊಳ್ಳೆಯನ್ನು ದೂರ ಅಟ್ಟುವ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿರುವ ಈ ಗಿಡದ ಸಾರವನ್ನು ಸ್ಪ್ರೇ, ಕ್ರೀಮ್, ಲೋಶನ್, ತೈಲ, ಮೋಂಬತ್ತಿಗಳು ಮುಂತಾದ ಹಲವು ರೀತಿಯ ಉತ್ಪನ್ನಗಳಲ್ಲಿ ಉಪಯೋಗಿಸಲಾಗುತ್ತದೆ. ಇದಕ್ಕಿರುವ ನಿಂಬೆಯ ಗಾಢವಾದ ಸುಗಂಧವೇ ಸೊಳ್ಳೆಯನ್ನು ದೂರ ಇರಿಸುತ್ತದೆ. ಮನೆಯ ಸುತ್ತಮುತ್ತಲಿನ ಭಾಗದಲ್ಲಿ ಅಥವಾ ಬಾಲ್ಕನಿಯ ಕುಂಡಗಳಲ್ಲಾದರೂ ಸರಿ, ಬೆಳೆಸಿ. ಇದು ಹಲವು ಔಷಧೀಯ ಉಪಯೋಗಗಳನ್ನೂ ಹೊಂದಿದ್ದು, ಸೊಳ್ಳೆ ಬಾರದಂತೆ ತಡೆಯಲೂ ನೆರವಾಗುತ್ತದೆ. ಆದರೆ ಈ ಹುಲ್ಲಿನ ಅಂಚು ಹರಿತವಾಗಿರುವುದರಿಂದ, ನೇರವಾಗಿ ಕೈ-ಕಾಲುಗಳ ಮೇಲೆ ಉಜ್ಜಿಕೊಳ್ಳಲು ಯತ್ನಿಸಬೇಡಿ, ಗಾಯವಾದೀತು.