ಸೋರೆಕಾಯಿಯನ್ನು ಬೇಸಿಗೆಯಲ್ಲಿ ಬಹಳಷ್ಟು ಜನರು ತಿನ್ನುತ್ತಾರೆ. ಸಾಮಾನ್ಯವಾಗಿ ಸೋರೆಕಾಯಿಯನ್ನು ಹಲ್ವಾ, ಪಲ್ಯ, ಕರಿ, ಸಾಂಬಾರ್ ರೂಪದಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಆದರೆ ಎಂದಾದರೂ ಸೋರೆಕಾಯಿ ಜ್ಯೂಸ್ ಮಾಡಿ ಕುಡಿದ್ದೀರಾ?, ಈ ಪ್ರಶ್ನೆ ಕೇಳುತ್ತಿರುವುದನ್ನು ನೋಡಿ ಯಾಕೆ ಜ್ಯೂಸ್’ನಲ್ಲಿ ಅಂಥದ್ದೇನಿದೆ ಎಂದು ನಿಮಗನಿಸಬಹುದು. ಆದರೆ ನಿಮಗೆ ಗೊತ್ತಾ, ಎಲ್ಲರ ಕೈಗೆಟಕುವ ಸೋರೆಕಾಯಿ ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುವುದಲ್ಲದೆ, ಅನೇಕ ಕಾಯಿಲೆಗಳಿಗೆ ಮದ್ದಾಗಿದೆ.
ಸಂಶೋಧನೆಯೊಂದು ಹೆಚ್ಚುವರಿ ಕೊಬ್ಬನ್ನು ವೇಗವಾಗಿ ಸುಡಲು ಸೋರೆಕಾಯಿ ಜ್ಯೂಸ್ ನಿಮಗೆ ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಬಹಳ ಬೇಗ ಜೀರ್ಣವಾಗುವ ಈ ತರಕಾರಿ, ಭಾರತೀಯರ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇಲ್ಲಿ ಸೋರೆಕಾಯಿ ಜ್ಯೂಸ್ ಸೇವಿಸುವುದರಿಂದ ಆಗುವ ಲಾಭಗಳನ್ನು ಕೊಡಲಾಗಿದೆ ನೋಡಿ…
ಪವರ್ ಫುಲ್ ಔಷಧಿ
ವಿಶೇಷವಾಗಿ ಸೋರೆಕಾಯಿ ಜ್ಯೂಸ್ ಅನ್ನು ಪವರ್ ಫುಲ್ ಔಷಧಿ ಎಂದು ಕರೆದರೆ ತಪ್ಪಾಗಲಾರದು. ಲಾಕಿ ಎಂದು ಕರೆಯಲ್ಪಡುವ ಸೋರೆಕಾಯಿಯಲ್ಲಿ ಫೈಬರ್ ಮತ್ತು ನೀರಿನ ಅಂಶ ಹೇರಳವಾಗಿದೆ. ತೂಕ ನಷ್ಟ ಮಾತ್ರವಲ್ಲದೆ, ಇದು ಅಸಿಡಿಟಿ, ಅಜೀರ್ಣ, ಅಲ್ಸರ್ ಮತ್ತು ಮಲಬದ್ಧತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಸೋರೆಕಾಯಿ ಸುಮಾರು 92% ನೀರು ಮತ್ತು ಖನಿಜಗಳಿಂದ ಕೂಡಿದ್ದು, ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ.
ಕ್ಯಾಲೊರಿ ಎಷ್ಟಿದೆ?
ಕ್ಯಾಲೊರಿ ಅಂಶಕ್ಕೆ ಬಂದಾಗ 100 ಗ್ರಾಂ ತರಕಾರಿ ಸುಮಾರು 15 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹಾಗೆಯೇ ಕೇವಲ 1 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕೂಡ ಕಡಿಮೆ. ಸೋರೆಕಾಯಿಯಲ್ಲಿ ಹೆಚ್ಚು ನೀರು ಮತ್ತು ಪೋಷಕಾಂಶಗಳಿರುವುದರಿಂದ ಹೆಚ್ಚಿನ ಸಮಯದವರೆಗೆ ಹಸಿವಾಗದಂತೆ ನಿಮಗೆ ಸಹಾಯ ಮಾಡುತ್ತದೆ.
ಆದರೆ ಸೆಪ್ಟೆಂಬರ್ 2012 ರಲ್ಲಿ ಏಷ್ಯನ್ ಪೆಸಿಫಿಕ್ ಜರ್ನಲ್ ಆಫ್ ದಿ ಟ್ರಾಪಿಕಲ್ ಮೆಡಿಸಿನ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಇಲಿಗಳ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡಲು ಸೋರೆಕಾಯಿ ಸಹಾಯ ಮಾಡಿದೆ ಎಂದು ಕಂಡುಹಿಡಿಯಲಾಗಿದೆ. ಆದರೆ ಮಾನವನ ಮೇಲೆ ಅಂತಹ ಯಾವುದೇ ಸಂಶೋಧನೆ ಇನ್ನೂ ನಡೆದಿಲ್ಲ.
ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ?
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಸೋರೆಕಾಯಿ, ಹೃದಯ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಸೋರೆಕಾಯಿಯಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಬಹಳ ಕಡಿಮೆ.
ಇದು ದೇಹದಿಂದ ಕೊಬ್ಬನ್ನು ಕಳೆದುಕೊಳ್ಳಲು ಅಗತ್ಯವಾದ ನೀರು ಮತ್ತು ಪೋಷಕಾಂಶಗಳಿಂದ ಕೂಡಿದೆ. ಸೋರೆಕಾಯಿಯಲ್ಲಿ ಅಗತ್ಯವಾದ ಪೋಷಕಾಂಶಗಳಾದ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಕೆ, ವಿಟಮಿನ್ ಎ, ವಿಟಮಿನ್ ಇ, ಐರನ್, ಫೋಲೇಟ್, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಕೂಡ ಇದೆ.
ಸೋರೆಕಾಯಿಯಲ್ಲಿ ನೀರು ಮತ್ತು ನಾರಿನಂಶವು ಅಧಿಕವಾಗಿರುತ್ತದೆ. ಇದರಿಂದ ನಿಮಗೆ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಇದು ನಿಮಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಶಕ್ತಿಯ ಸಾಂದ್ರತೆಯು ಕಡಿಮೆ ಇರುವುದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಮೇ 2012 ರಲ್ಲಿ ಜರ್ನಲ್ ಆಫ್ ದಿ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳಿದೆ.
ಜ್ಯೂಸ್ ಮಾತ್ರ ಕುಡಿದರೆ ಸಾಕೇ?
ವಾರದಲ್ಲಿ ಕನಿಷ್ಠ 4 ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ಜ್ಯೂಸ್ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಸೋರೆಕಾಯಿ ಜ್ಯೂಸ್ ಮಾತ್ರ ಆ ಹೆಚ್ಚು ಕೊಬ್ಬನ್ನು ಕರಗಿಸುವ ಕೆಲಸವನ್ನು ಮಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆರೋಗ್ಯಕರ ಆಹಾರವನ್ನು ಅಳವಡಿಸಿಕೊಳ್ಳುವುದರಿಂದ ಹಿಡಿದು ದೈಹಿಕ ವ್ಯಾಯಾಮದವರೆಗೆ ಒಟ್ಟಾರೆಯಾಗಿ ಉತ್ತಮ ತೂಕ ಇಳಿಸುವ ನಿಯಮವನ್ನು ಅನುಸರಿಸುವುದು ಅಷ್ಟೇ ಮುಖ್ಯ.
ಯಾವಾಗ ಸೇವಿಸಬೇಕು?
ಉತ್ತಮ ಫಲಿತಾಂಶಗಳಿಗಾಗಿ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಸೇವಿಸಬೇಕು. ಅಲ್ಲದೆ, ಜ್ಯೂಸ್ ಸಾಕಷ್ಟು ವೇಗವಾಗಿ ಆಕ್ಸಿಡೀಕರಣಗೊಳ್ಳುವುದರಿಂದ ತಕ್ಷಣ ಅದನ್ನು ಸೇವಿಸಬೇಕು. ನೀವು ಜ್ಯೂಸ್ ಅನ್ನು ಜಾಲರಿಯಲ್ಲಿ ಸೋಸಬಾರದು. ಏಕೆಂದರೆ ಇದರಿಂದ ಫೈಬರ್ ನಷ್ಟವಾಗುತ್ತದೆ. ಫೈಬರ್ ಹೆಚ್ಚು ತೂಕ ಇಳಿಸಲು ಸಹಾಯ ಮಾಡುವ ಅಂಶವಾಗಿದೆ. ಜ್ಯೂಸ್ ರುಚಿಯನ್ನು ಹೆಚ್ಚಿಸಲು ನೀವು ಇದಕ್ಕೆ ನಿಂಬೆ ಮತ್ತು ಪುದೀನಾ ಸೇರಿಸಬಹುದು.
ಆದರೆ ಹೆಚ್ಚು ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ವಾಕರಿಕೆ, ಹುಣ್ಣು, ಅತಿಸಾರ, ಹೊಟ್ಟೆ ನೋವು ಮತ್ತು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಈ ಅಪಾಯ ಬರಬಾರದೆಂದರೆ ಸರಿಯಾಗಿ ಬೇಯಿಸಿದ ಜ್ಯೂಸ್ ಕುಡಿಯುವುದು ಒಳ್ಳೆಯದು ಮತ್ತು ಕಹಿಯಾದ ರುಚಿ ಇದ್ದರೆ ಸೇವಿಸಬಾರದು. ಹೌದು, ಸೋರೆಕಾಯಿ ಜ್ಯೂಸ್’ನಲ್ಲಿ ಕಂಡುಬರುವ ಕಹಿ ರುಚಿಯು ಅದರಲ್ಲಿರುವ ಕುಕುರ್ಬಿಟಾಸಿನ್ ಸಂಯುಕ್ತಗಳಿಂದಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಇದು ಜನರಿಗೆ ವಿಷಕಾರಿಯಾಗಿದೆ.
ಎಷ್ಟು ಸೇವಿಸಬೇಕು?
ಒರ್ವ ವ್ಯಕ್ತಿ ಒಂದು ದಿನದಲ್ಲಿ ಮೂರು ಔನ್ಸ್, ಅಂದರೆ ಸರಿಸುಮಾರು 88 ಮಿಲಿಗಿಂತ ಹೆಚ್ಚು ಸೋರೆಕಾಯಿ ಜ್ಯೂಸ್ ಕುಡಿಯಬಾರದು ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ನ್ಯೂಟ್ರಿಷನ್, ಫಾರ್ಮಾಕಾಲಜಿ, ನ್ಯೂರೋಲಾಜಿಕಲ್ ಕಾಯಿಲೆಗಳಲ್ಲಿ ಪ್ರಕಟವಾದ ಅಧ್ಯಯನವು ತಿಳಿಸಿದೆ.