ಭೋಪಾಲ್;– ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನೀವೇ ನಿರ್ಧರಿಸಿ, ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ ಎಂದು ಪ್ರತಿಪಕ್ಷ ಮೈತ್ರಿಗೆ ಪ್ರಧಾನಿ ಮೋದಿ ಚಾಟಿ ಬೀಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ‘ಗ್ಯಾರಂಟಿ ಭರವಸೆ’ಗಳು ದೇಶದಲ್ಲಿ ಸದ್ದು ಮಾಡುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿ ಯೋಜನೆಗಳು ಹಾಗೂ ವಿಪಕ್ಷಗಳ ವಿರುದ್ಧ ಪ್ರಹಾರ ನಡೆಸಿದ್ದಾರೆ.
ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ಮಂಗಳವಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇತ್ತೀಚೆಗೆ ಹೊಸ ಪದವೊಂದು ಹುಟ್ಟಿಕೊಂಡಿದೆ. ಅದೇ ‘ಗ್ಯಾರಂಟಿ’ ಎಂಬ ಪದ. ಆದರೆ ಮೊನ್ನೆ ಪಟನಾದಲ್ಲಿ ಸಭೆ ಮಾಡಿದವರ ಮುಖ ನೋಡಿದೆ. ಅವರೆಲ್ಲ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ಮಾಡಿದವರು. ಹಗರಣದಲ್ಲಿ ಕಾಂಗ್ರೆಸ್ಸೇ ಮುಂಚೂಣಿಯಲ್ಲಿದೆ’ ಎಂದು ವಾಗ್ದಾಳಿ ನಡೆಸಿದರು.
ಹೀಗಾಗಿ ಮತ್ತೆ ಜನರು ವಿಪಕ್ಷಗಳ ಬೆನ್ನು ಹತ್ತಿ ಹೋದರೆ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ‘ಗ್ಯಾರಂಟಿ’. ಆದರೆ ಬಿಜೆಪಿ ಮಾತ್ರ ಹಗರಣಕೋರರ ವಿರುದ್ಧ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುತ್ತದೆ. ಹೀಗೆ ಹಗರಣ ಮಾಡುವವರ ‘ಗ್ಯಾರಂಟಿ’ ಭರವಸೆಗಳು ನಿಮಗೆ ಬೇಕಾ ಅಥವಾ ಹಗರಣಗಳ ವಿರುದ್ಧ ಕ್ರಮ ‘ಗ್ಯಾರಂಟಿ’ ನೀಡುವ ಬಿಜೆಪಿ ಬೇಕಾ? ನೀವೇ ನಿರ್ಧರಿಸಿ’ ಎಂದು ಜನತೆಗೆ ಕರೆ ನೀಡಿದರು.