ಬೆಂಗಳೂರು ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಈ ಬಗ್ಗೆ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕುರಿ ಮಾಂಸ. ಲ್ಯಾಬ್ ರಿಪೋರ್ಟ್ನಲ್ಲಿ ಇದು ಕುರಿ ಮಾಂಸ ಎಂದು ಸಾಬೀತಾಗಿದೆ ಎಂದಿದ್ದಾರೆ.
ಆ ಮೂಲಕ ʼನಾಯಿ ಮಾಂಸ ವಿವಾದʼ ಎತ್ತಿರುವ ಪುನೀತ್ ಕೆರೆಹಳ್ಳಿ ಬಳಗಕ್ಕೆ ಹಿನ್ನಡೆಯಾಗಿದೆ. ಜುಲೈ 26ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್ಗಳಷ್ಟು ರಾಜಸ್ಥಾನದಿಂದ ತರಿಸಿದ ಮಾಂಸದ ಬಾಕ್ಸ್ಗಳು ಪತ್ತೆಯಾಗಿದ್ದವು. ಇವುಗಳನ್ನು ಹೈದರಾಬಾದ್ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಹಾಗೆಂದರೆ ಅದು ಕುರಿಯ ವೈಜ್ಞಾನಿಕ ಹೆಸರು. ಹೀಗಾಗಿ ಇದು ಕುರಿ ಮಾಂಸ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
ಈಗ ಡಿಎನ್ಎ ಪರೀಕ್ಷೆ ಮಾತ್ರ ಮಾಡಲಾಗಿದೆ. ಇದರ ಶುಚಿತ್ವದ ಬಗ್ಗೆ ಇನ್ನೊಂದು ಲ್ಯಾಬ್ನಲ್ಲಿ ಪರೀಕ್ಷೆ ನಡೆಯುತ್ತಿದೆ. ಈ ಶುಕ್ರವಾರ ಅದರ ವರದಿ ಕೂಡ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ
ಈ ಮಾಂಸವನ್ನು ನಾಯಿ ಮಾಂಸ ಎಂದು ಆರೋಪಿಸಿದವರ ಮೇಲೆ ಕ್ರಮ ನಾವು ತೆಗೆದುಕೊಳ್ಳುವುದಿಲ್ಲ. ನಾವು ಈಗ ಬಂದಿರುವ ವರದಿಯನ್ನು ಪೊಲೀಸರಿಗೆ ನೀಡುತ್ತೇವೆ. ಪೊಲೀಸರು ವರದಿ ಪಡೆದುಕೊಂಡು ಹೊಸ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಬಹುದು. ಅವರು ಮುಂದಿನ ಕಾನೂನಾತ್ಮಕ ಕ್ರಮ ಜರುಗಿಸುತ್ತಾರೆ. ಆಮದು ಮಾಡಿಕೊಂಡವರ ಬಳಿ ಎಲ್ಲಾ ಪರವಾನಗಿ ಇದೆ, ಅವರು ನಮಗೆ ದಾಖಲೆ ಕೊಟ್ಟಿದ್ದಾರೆ ಎಂದು ಶ್ರೀನಿವಾಸ್ ಹೇಳಿದ್ದಾರೆ