ವಾಷಿಂಗ್ಟನ್: 2016ರ ಚುನಾವಣಾ ಪ್ರಚಾರದ ವೇಳೆ ನೀಲಿಚಿತ್ರ ತಾರೆಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣ ಸಂಬಂಧ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಮಾಡಿದೆ. ಇದೀಗ ಟ್ರಂಪ್ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿರುವ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ತೀರ್ಪನ್ನು ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ತಂತ್ರದ ಭಾಗವಾಗಿ ಬಳಸುತ್ತಿದ್ದಾರೆ. ಅಲ್ಲದೇ ಈಗಿನ ಅಧ್ಯಕ್ಷ ಜೋ ಬೈಡನ್ ಈ ತಪ್ಪಿಗಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಾರದ ಹಿಂದೆ ಮ್ಯಾನ್ಹ್ಯಾಟನ್ನಲ್ಲಿ ತಮ್ಮ ಬಂಧನದ ಬಗ್ಗೆ ಮಾತನಾಡಿ ಟ್ರಂಪ್, ಅದನ್ನು ತೀವ್ರವಾಗಿ ವಿರೋಧಿಸಲು ಬೆಂಬಲಿಗರನ್ನು ಕೇಳಿದ್ದರು. ಇದೆಲ್ಲಾ ವಿರೋಧಿಗಳ ಕುತಂತ್ರವಾಗಿದ್ದು, 2024ರ ಚುನಾವಣೆಯಲ್ಲಿ ಅವರನ್ನು ನಿಲ್ಲಿಸುವ ಕಸರತ್ತು ಎಂದು ಹೇಳಿದ್ದರು.
ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ಗೆ ಟ್ರಂಪ್ ಹಣ ನೀಡಿದ ಪ್ರಕರಣ 2016 ರ ಹಿಂದಿನದು. ವಾಸ್ತವವಾಗಿ, ಟ್ರಂಪ್ ಈ ಪೋರ್ನ್ ಸ್ಟಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಮಾತು ಮುನ್ನೆಲೆಗೆ ಬಂದಿದ್ದು, ಅದನ್ನು ಮರೆಮಾಚಲು ಅವರು ಸ್ಟಾರ್ಮಿಗೆ ಹಣ ನೀಡಿದ್ದಾರೆ ಎಂದು ಹೇಳಲಾಗಿದೆ. 2006ರಲ್ಲಿ ಟ್ರಂಪ್ ಮತ್ತು ಅವರ ನಡುವೆ ಸಂಬಂಧವಿತ್ತು ಎಂಬುದನ್ನು ಸ್ಟ್ರೋಮಿ ಬಹಿರಂಗಪಡಿಸಿದ್ದರು.
ತನ್ನನ್ನು ಟಿವಿ ಸ್ಟಾರ್ ಮಾಡುವ ಭರವಸೆಯ ಮೇರೆಗೆ ಟ್ರಂಪ್ ದೈಹಿಕ ಸಂಬಂಧ ಹೊಂದಿದ್ದರು ಎಂದು ಪೋರ್ನ್ ನಟಿ ಆರೋಪಿಸಿದ್ದರು. ಆದರೆ ಇದನ್ನು ಟ್ರಂಪ್ ನಿರಾಕರಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಪೋರ್ನ್ ಸ್ಟಾರ್ಗಳಿಗೆ ಹಣ ಪಾವತಿಸಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಟ್ರಂಪ್ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಹೊರಬರದಂತೆ ತಡೆಯಲು ಅವರಿಗೆ ಹಣ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.