ಮಳೆಯ ಬರ ಆವರಿಸಿರುವ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮಸ್ಥರು ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿದ್ದಾರೆ. ಗ್ರಾಮಸ್ಥರ ಒಮ್ಮತದಂತೆ ಗ್ರಾಮದೇವತೆ ಹನುಮಾನ ದೇವಸ್ಥಾನಮುಂಭಾಗದಲ್ಲಿ ಶನಿವಾರ ಗಂಡು ಮತ್ತು ಹೆಣ್ಣು ಕತ್ತೆಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು.
ಅಷ್ಠೇ ಅಲ್ಲ ನವ ಜೋಡಿಯ ವಿವಾಹದ ಖುಷಿ ಹಂಚಲು ಊರಿಗೆಲ್ಲ ಊಟ ಹಾಕಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ 4 ಗಂಟೆವರೆಗೆ ನಡೆದ ಆರತಕ್ಷತೆಯಲ್ಲಿ ನಾವಲಗಿ ಹಾಗು ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡರು. ಗಂಡಿನ ಕಡೆಯವರಾಗಿ ರಾಮಪ್ಪ ಭಜಂತ್ರಿ ನೇತೃತ್ವ ವಹಿಸಿದರೆ, ಹೆಣ್ಣಿನ ಕಡೆಯವರಾಗಿ ಸಣ್ಣಪ್ಪ ನಿಂತಿದ್ದರು.
ದೇವಸ್ಥಾನ ಮುಂಭಾಗದಲ್ಲಿ ಸ್ವಚ್ಛಂಧವಾಗಿ ಚಪ್ಪರದೊಂದಿಗೆ ರಂಗೋಲಿ ಹಾಕಿ, ಗಂಡಿನ ಕಡೆಯವರನ್ನು ಕತ್ತೆ ಜತೆ ವಾದ್ಯ ತಂಡ ದೊಂದಿಗೆ ಮದುವೆ ಮಂಟಪಕ್ಕೆ ಬರಮಾಡಿಕೊಂಡರು. ಬೀಗರನ್ನು ಎದುರುಗೊಂಡ ಜನರು ವರೋಪಚಾರಗಳನ್ನು ಮಾಡಿದರು. ಅರಿಷಿನ ನೀರು ಹಾಕಿ ಹೆಣ್ಣು ಕತ್ತೆಗೆ ಸೀರೆ, ಬಳಿ, ಮಂಗಳ ಸೂತ್ರದೊದಿಗೆ ಹಾರವನ್ನು ಹಾಕಿ, ಗಂಡು ಕತ್ತೆಗೆ ಬಟ್ಟೆ, ಟೊಪ್ಪಿಗೆ, ಟಾವೆಲ್ ಹಾಕಿದ್ದರು.
ಎರಡೂ ಕಡೆಯವರು ತಮ್ಮ ನೆಂಟರಿಷ್ಟರ ಮದುವೆಗಳಲ್ಲಿ ಪಾಲ್ಗೊಂಡಿರುವಂತೆ ಸಂಭ್ರಮಿಸಿದರು.ಇವೆಲ್ಲದರ ನಂತರ ಇಡೀ ಗ್ರಾಮದ ತುಂಬೆಲ್ಲ ನವದಂಪತಿಗಳ ಮೆರವಣಿಗೆ ಕೂಡ ಜರುಗಿತು.ಈ ಸಂದರ್ಭ ಎಲ್ಲೆಂದರಲ್ಲಿ ಮನೆಗಳ ಮುಂದೆಮೆರವಣಿಗೆ ಮುಂದೆ ನೀರು ಹಾಕುವದರೊಂದಿಗೆ ಸ್ವಾಗತಿಸಿ ಮರ್ನಾಲ್ಕು ಸಾವಿರರೂ.ಗಳಷ್ಟು ಆಹೇರಿಯೂ ಸೇರಿತು.
ಇದೇ ಸಂದರ್ಭ ಗುರು ಮರಡಿಮಠ ಮಾತನಾಡಿ, ಎಲ್ಲರೂ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಇನ್ನೇನು ಬೀಜ ಮೋಲಕೆಯೊಡೆದ ಸಂದರ್ಭದಲ್ಲಿ ಮಳೆ ದಿಢೀರನೆ ಕೈಕೊಟ್ಟಿದ್ದು ರೈತರಿಗೆ ಬರೆ ಎಳೆದಂತಾಗಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದಲ್ಲಿ ಬರಗಾಲ ಎದುರಾಗುವ ಭೀತಿ ಕಾರಣ ಕತ್ತೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಂತೆ ಈ ಕಾರ್ಯ ಮಾಡುತ್ತಿದ್ದೇವೆಂದರು.
ಪ್ರಕಾಶ ಕುಂಬಾರ
ಬಾಗಲಕೋಟೆ