ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರೇ ಅವರನ್ನು ಬ್ರದರ್ಸ್ ಅಂತಾ ಅಪ್ಪಿಕೊಳ್ಳಲು ಹೋಗಬೇಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾಲೆಳೆದರು. ಈಗಲಾದರೂ ಡಿಕೆ ಶಿವಕುಮಾರ್ ಅವರೇ ವಿವೇಚನೆ ಇಲ್ಲದೇ, ಮತ ಬ್ಯಾಂಕ್ಗಾಗಿ ಅವರನ್ನು ಬ್ರದರ್ಸ್ ಎನ್ನಬೇಡಿ. ಅವರನ್ನು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು, ಕರ್ನಾಟಕ ಸಂಕಷ್ಟಕ್ಕೆ ಹೋಗಬಹುದು ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಅವರು ಅಮಾಯಕರು ಎಂದು ಬಿಂಬಿಸಿದರು. ಬಿಜೆಪಿ ದುರುದ್ದೇಶಪೂರ್ವಕವಾಗಿ ಬಂಧಿಸುತ್ತಿದೆ ಎಂದು ಹೇಳಿದರು. ಇವತ್ತು ಕಾಂಗ್ರೆಸ್ ಸರ್ಕಾರ ಬಂದಿದೆ. ಆದರೆ, ದೇಶದಲ್ಲಿ ಉಗ್ರರು ಉಗ್ರಗಾಮಿ ಚಟುವಟಿಕೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಅವರನ್ನು ನೀವು ಅಪ್ಪಿಕೊಳ್ಳಲು ಹೋದರೆ ಬೆಂಗಳೂರು ಕರ್ನಾಟಕ ಸಂಕಷ್ಟಕ್ಕೆ ಹೋಗಬಹುದು ಎಂದರು.
ಪೊಲೀಸರಿಗೆ ಮುಕ್ತ ತನಿಖೆ ನಡೆಸಲು ಅವಕಾಶ ಕೊಡಬೇಕು. ಬ್ರದರ್ಸ್ ಅಂತ ಹೇಳಿಕೆ ನೀಡಿ, ಯಾರಾದರೂ ಮಾತು ಕೇಳಿ ಅವರನ್ನು ಬಿಡಿಸುವ ಕೆಟ್ಟ ಕೆಲಸ ಮಾಡಬೇಡಿ. ಬೆಂಗಳೂರಲ್ಲಿ ಹಲವು ಕಡೆ ಬಾಂಬ್ ಬ್ಲಾಸ್ಟ್ ಮಾಡುವಂತಹ ಸಂಚು ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಕಾಂಗ್ರೆಸ್ನವರು ಈಗಲಾದರೂ ಮನಪರಿವರ್ತನೆ ಮಾಡಿಕೊಳ್ಳಿ ಎಂದು ವಿನಂತಿಸುತ್ತೇನೆ ಎಂದು ತಿಳಿಸಿದರು.
ಕೇಂದ್ರ ಗುಪ್ತಚರ ಇಲಾಖೆ ಹಾಗೂ ನಮ್ಮ ಕ್ರೈಂ ಬ್ರಾಂಚ್ ಸೇರಿ ಶಂಕಿತ ಉಗ್ರರ ಬಂಧಿಸಿದ್ದಾರೆ. ಈಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಜಾಲ ಬಹಳ ಆಳವಾಗಿದೆ ಎಂದು ಭಾವಿಸಿದ್ದೇನೆ. ಇನ್ನೊಬ್ಬ ಉಗ್ರ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಇಡೀ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ – NIAಗೆ ವಹಿಸುವುದು ಸೂಕ್ತ ಎಂದು ಭಾವಿಸುತ್ತೇನೆ. ಕರ್ನಾಟಕ ರಾಜ್ಯ ಮೀರಿ ಐಸಿಸ್ ಜೊತೆ ಸಂಪರ್ಕ ಇರುವ ಹಿನ್ನೆಲೆ ಎನ್ಐಎ ತನಿಖೆಗೆ ವಹಿಸಬೇಕು ಎಂದು ಹೇಳಿದರು.