ರಿಯಲ್ ಸ್ಟಾರ್ ಉಪೇಂದ್ರ ನಟನೆಯ, ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ.
ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದ್ದು, ಉಪೇಂದ್ರ, ಸುದೀಪ್, ನಾಯಕಿ ಶ್ರೆಯಾ ಶಿರಿನ್ ಇನ್ನಿತರರು ಮುಂಬೈನಲ್ಲಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾದ ಟೀಸರ್, ಟ್ರೈಲರ್ ನೋಡಿದ ಬಹುತೇಕರು ಇದು ಮತ್ತೊಂದು ಕೆಜಿಎಫ್ ಎಂದಿದ್ದರು, ಆದರೆ ಇದನ್ನು ಅಲ್ಲಗಳೆದಿರುವ ಉಪೇಂದ್ರ, ‘ಕೆಜಿಎಫ್’ ಜೊತೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ ಎಂದಿದ್ದಾರೆ.
ಮುಂಬೈನಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಉಪೇಂದ್ರ, ”ಕೆಜಿಎಫ್’ ಸಿನಿಮಾದೊಂದಿಗೆ ‘ಕಬ್ಜ’ ಸಿನಿಮಾವನ್ನು ಹೋಲಿಸಬೇಡಿ. ಎರಡೂ ಬೇರೆ-ಬೇರೆ ಸಿನಿಮಾಗಳು. ಟೀಸರ್ ನೋಡಿದ ಹಲವರು ‘ಕೆಜಿಎಫ್’ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ ನೋಡಿದ ಮೇಲೆ ಗೊತ್ತಾಗಿದೆ ಅದೇ ಬೇರೆ ಕತೆ ಇದೇ ಬೇರೆ ಕತೆ ಎಂಬುದು. ಸಿನಿಮಾದ ಲುಕ್, ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆಯದ್ದೇ ಕತೆಗಳು” ಎಂದಿದ್ದಾರೆ.
ಸಿನಿಮಾದ ಟೀಸರ್ ಬಿಡುಗಡೆ ಆದಾಗಲಂತೂ ‘ಕೆಜಿಎಫ್’ ಕತೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು, ಆಗ ಮಾತನಾಡಿದ್ದ ಉಪೇಂದ್ರ, ”ಕೆಜಿಎಫ್’ ಥರ ಸಿನಿಮಾ ಮಾಡಿ ಅಂತಾರೆ, ‘ಕೆಜಿಎಫ್’ ಥರ ಮಾಡಿದರೆ ‘ಕೆಜಿಎಫ್’ ಥರಹ ಮಾಡಿದ್ದೀರಿ ಅಂತಾರೆ. ಏನು ಮಾಡಿದರೂ ಕೆಲವರು ಟೀಕೆ ಮಾಡ್ತಾರೆ” ಎಂದು ತಮಾಷೆ ಮಾಡಿದ್ದರು.
ಇತ್ತೀಚೆಗೆ ಬಿಡುಗಡೆ ಆದ ಟ್ರೈಲರ್ನಲ್ಲಿ ‘ಕಬ್ಜ’ ಸಿನಿಮಾದ ಕತೆಯ ಕೆಲವು ಭಾಗಗಳು ರಿವೀಲ್ ಆಗಿದ್ದು ‘ಕೆಜಿಎಫ್’ ಕತೆಗೂ ‘ಕಬ್ಜ’ ಸಿನಿಮಾದ ಕತೆಗೂ ಸಾಕಷ್ಟು ಅಂತರ ಇರುವುದು ತಿಳಿದು ಬರುತ್ತಿದೆ. ‘ಕೆಜಿಎಫ್’ ಸಿನಿಮಾದಲ್ಲಿ ನಾಯಕ ಆರಂಭದಿಂದಲೇ ರೌಡಿ ಆಗಿರುತ್ತಾನೆ. ಆದರೆ ‘ಕಬ್ಜ’ ಸಿನಿಮಾದಲ್ಲಿ ಉಪೇಂದ್ರ ಏರ್ಪೋರ್ಸ್ ಅಧಿಕಾರಿಯಾಗಿರುತ್ತಾರೆ. ‘ಕಬ್ಜ’ ಸಿನಿಮಾವು ಸ್ವಾತಂತ್ರ್ಯ ಪೂರ್ವದ ಕತೆಯನ್ನು ಹೊಂದಿದೆ. ಆದರೆ ‘ಕೆಜಿಎಫ್’ ಸ್ವಾತಂತ್ರ್ಯಾನಂತರದ ಕತೆಯನ್ನು ಒಳಗೊಂಡಿದೆ. ‘ಕೆಜಿಎಫ್’ ನಲ್ಲಿ ರಾಕಿಭಾಯ್ ಹೊರತಾಗಿ ಇನ್ಯಾವುದೇ ನಾಯಕ ಪಾತ್ರಗಳು ಇರಲಿಲ್ಲ ಆದರೆ ‘ಕಬ್ಜ’ ಸಿನಿಮಾದಲ್ಲಿ ಸುದೀಪ್, ಶಿವಣ್ಣ ಅವರುಗಳು ಮುಖ್ಯ ಪಾತ್ರದಲ್ಲಿದ್ದಾರೆ. ಇನ್ನೂ ಹಲವು ವ್ಯತ್ಯಾಸಗಳು ಎರಡೂ ಸಿನಿಮಾಕ್ಕೆ ಇವೆ.
ಆದರೆ ಕೆಜಿಎಫ್ ಮಾದರಿಯ ಲುಕ್ ಹಾಗೂ ಟೋನ್ ಕಬ್ಜ ಸಿನಿಮಾಕ್ಕೂ ಇದೆ. ಅದೇ ಕಪ್ಪು ಹಿನ್ನೆಲೆಯಲ್ಲಿಯೇ ‘ಕಬ್ಜ’ ಸಿನಿಮಾವನ್ನು ಆರ್ ಚಂದ್ರು ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಆರ್ ಚಂದ್ರು, ”ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದೇ ನಾನು ಈ ಸಿನಿಮಾ ಮಾಡಿದ್ದೇನೆ. ಅದೇ ರೀತಿಯ ಫೀಲ್ ನೀಡುವುದು ನನ್ನ ಉದ್ದೇಶವಾಗಿತ್ತು. ಅದೇ ಮಾದರಿಯ ಫೀಲ್ ತರಲು ಬಹಳ ಶ್ರಮಪಟ್ಟಿದ್ದೇವೆ” ಎಂದಿದ್ದರು. ಆರ್ ಚಂದ್ರು ಶ್ರಮ ಫಲ ನೀಡಿರುವುದು ಟೀಸರ್ ಹಾಗೂ ಟ್ರೈಲರ್ನಿಂದ ತಿಳಿದು ಬರುತ್ತಿದೆ.
‘ಕಬ್ಜ’ ಸಿನಿಮಾವು ಮಾರ್ಚ್ 17ಕ್ಕೆ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಉಪೇಂದ್ರ, ಶ್ರಿಯಾ ಶಿರಿನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ. ಸುದೀಪ್, ಶಿವರಾಜ್ ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.