ಲಕ್ಷ್ಮಿ ದೇವಿಯ ಶುಕ್ರನ ಸಂಬಂಧವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿ ಸಲಾಗಿದೆ. ಶುಕ್ರ ಮತ್ತು ಲಕ್ಷ್ಮೀ ಇಬ್ಬರೂ ಸಂಪತ್ತನ್ನು ಕರುಣಿಸುವವರು. ಈ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ತಾಯಿಯು ಸಂತೋಷಗೊಂಡರೆ, ಅವಳು ತನ್ನ ಸ್ಥಳೀಯರಿಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಆದರೆ ಶುಕ್ರವಾರದಂದು ಮಾಡಿದ ಸಣ್ಣ ತಪ್ಪು ಕೂಡಾ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಶುಕ್ರವಾರ ಈ ಕೆಲಸ ಮಾಡ್ಬೇಡಿ :
ಈ ವಸ್ತುಗಳ ದಾನಕ್ಕೆ ಶುಕ್ರವಾರ ಸೂಕ್ತವಲ್ಲ : ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಿದೆ. ನೀವು ಯಾವುದೇ ವಸ್ತುವನ್ನು ಶುದ್ಧ ಮನಸ್ಸಿನಿಂದ ದಾನ ಮಾಡಿದ್ರೂ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಂತ ವಾರದ ಎಲ್ಲ ದಿನ ,ಎಲ್ಲ ವಸ್ತುಗಳನ್ನು ದಾನ ಮಾಡೋದು ಸಾಧ್ಯವಿಲ್ಲ. ಶಾಸ್ತ್ರದಲ್ಲಿ ಹೇಳಿದಂತೆ ಅದಕ್ಕೆ ಮೀಸಲಾದ ದಿನವೇ ನೀವು ದಾನ ಮಾಡ್ಬೇಕು. ಶುಕ್ರವಾರದಂದು ನೀವು ಸಕ್ಕರೆ ಹಾಗೂ ಬೆಳ್ಳಿಯ ವಸ್ತುಗಳನ್ನು ದಾನವಾಗಿ ನೀಡಬೇಡಿ. ಸಕ್ಕರೆಯನ್ನು ದಾನ ಮಾಡಿದ್ರೆ ನಿಮ್ಮ ಗ್ರಹದಲ್ಲಿ ಶುಕ್ರ ದುರ್ಬಲನಾಗುತ್ತಾನೆ. ಭೌತಿಕ ಸುಖ ಲಭಿಸುವುದಿಲ್ಲ.
ಪತಿ – ಪತ್ನಿ ಜಗಳ ಮಾಡ್ಬೇಡಿ : ಪತಿ – ಪತ್ನಿ ಮಧ್ಯೆ ಸಣ್ಣಪುಟ್ಟ ಗಲಾಟೆ ಸಾಮಾನ್ಯ. ಆದ್ರೆ ಇದೇ ಗಲಾಟೆ ಯಾವಾಗ ದೊಡ್ಡದಾಗುತ್ತೆ ಎಂಬುದು ತಿಳಿಯೋದಿಲ್ಲ. ಯಾವುದೇ ಸಮಸ್ಯೆಯಿರಲಿ, ಶುಕ್ರವಾರ ಮಾತ್ರ ಕಿತ್ತಾಡಲು ಹೋಗ್ಬೇಡಿ. ವಾರ ನೋಡಿ, ಗಲಾಟೆ ಮಾಡ್ದೆ ಸುಮ್ಮನಾಗೋದು ಬೆಸ್ಟ್. ಶುಕ್ರವಾರ ಜಗಳವಾಡಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಶುಕ್ರ ವೈವಾಹಿಕ ಜೀವನ ಹಾಗೂ ದೈಹಿಕ ಸಂತೋಷದ ಸಂಕೇತವಾಗಿದ್ದಾನೆ. ಈ ದಿನ ನೀವು ಕಿತ್ತಾಡಿದ್ರೆ ಸಮಸ್ಯೆ ದೊಡ್ಡದಾಗಿ ಶಾಶ್ವತವಾಗಿ ಇಬ್ಬರೂ ಬೇರೆಯಾಗುವ ಸಾಧ್ಯತೆಯಿರುತ್ತದೆ.
ಆಸ್ತಿ ಖರೀದಿಗೆ ಹೋಗ್ಬೇಡಿ : ಶುಕ್ರವಾರ ಶುಭ ದಿನ ಹೌದು, ಆದ್ರೆ ಈ ದಿನ ಆಸ್ತಿ ಖರೀದಿ ಮಾಡಬಾರದು. ಮನೆ, ಆಸ್ತಿ ಖರೀದಿ ಮಾಡೋದು ಜೀವನದ ದೊಡ್ಡ ಕೆಲಸಗಳಲ್ಲಿ ಒಂದು. ಈ ದಿನವನ್ನು ನಾವು ಮುಹೂರ್ತ ನೋಡಿ ನಿಶ್ಚಯಿಸ್ತೇವೆ. ಒಂದ್ವೇಳೆ ಮುಹೂರ್ತ ನೋಡಿ ಖರೀದಿ ಸಾಧ್ಯವಾಗಿಲ್ಲ ಎಂದಾದ್ರೂ ನೀವು ಶುಕ್ರವಾರ ಮಾತ್ರ ಖರೀದಿ ಸಹವಾಸಕ್ಕೆ ಹೋಗ್ಬೇಡಿ. ಇದ್ರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಮಹಿಳೆಯ ಅವಮಾನ ಸಲ್ಲದು : ಶುಕ್ರವಾರ ಮಾತ್ರವಲ್ಲ ಎಂದೂ ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಅವಮಾನಿಸಬಾರದು. ಅವರಿಗೆ ದುಃಖವಾಗುವಂತೆ ನಡೆದುಕೊಳ್ಳಬಾರದು. ಶುಕ್ರವಾರ ಲಕ್ಷ್ಮಿಗೆ ಮೀಸಲಿರುವ ಕಾರಣ ಆ ದಿನವಂತೂ ಎಚ್ಚರಿಕೆಯಿಂದ ಮಾತನಾಡಬೇಕು. ಮನೆಯಲ್ಲಿರುವ ಹೆಣ್ಣು ನೊಂದುಕೊಂಡ್ರೆ ಮನೆ ಉದ್ಧಾರ ಸಾಧ್ಯವಿಲ್ಲ. ಹೆಣ್ಣಿಗೆ ಗೌರವ ಸಿಗದ ಮನೆಯಲ್ಲಿ ಆಸ್ತಿ, ಧನ, ಸಂತೋಷದ ಕೊರತೆಯಾಗುತ್ತದೆ. ಹಾಗಾಗಿ ನೀವು ಶುಕ್ರವಾರ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಅವಮಾನಿಸಬೇಡಿ. ಅವರಿಗೆ ಬೇಸರವಾಗುವಂತೆ ನಡೆದುಕೊಳ್ಳಬೇಡಿ.
ಶುಕ್ರವಾರ ಈ ಕೆಲಸ ಮಾಡಿ : ಶುಕ್ರವಾರ ನೀವು ಬಿಳಿ ಬಣ್ಣದ ವಸ್ತು, ಬಟ್ಟೆ ಬಳಸಿ. ಮನೆ, ಮನಸ್ಸು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಶುಕ್ರನಿಗೆ ಸಂಬಂಧಿಸಿದ ವಸ್ತುವನ್ನು ದಾನ ಮಾಡಿ. ವಿಷ್ಣು ಹಾಗೂ ಲಕ್ಷ್ಮಿ ಪೂಜೆ ಮಾಡಿ.