ದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಬಾಲರಾಮನ ದರ್ಶನಕ್ಕೆ ಸಂಬಂಧಿಸಿದಂತೆ ನಕಲಿ ಲಿಂಕ್ ನಂಬಿ ಮೋಸ ಹೋಗಬೇಡಿ ಎಂದು ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಎಚ್ಚರಿಕೆ ನೀಡಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕೆ ಯಾವುದೇ ಪಾಸ್ ಅಗತ್ಯ ಇಲ್ಲ. ವಿಶೇಷ ಆರತಿಗಳಿಗೆ ಮಾತ್ರ ಪಾಸ್ ಅನ್ನು ವೆಬ್ಸೈಟ್ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಪಾಸ್ ವಿತರಣೆ ಹೆಸರಲ್ಲಿ ನಕಲಿ ವೆಬ್ಸೈಟ್ಗಳು ಹುಟ್ಟಿಕೊಂಡಿದ್ದು ಹಣ ವಂಚಿಸುವ ಸಾಧ್ಯತೆಗಳಿದೆ. ಈ ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ಎಚ್ಚರಿಕೆ ನೀಡಿದೆ
ದರ್ಶನ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್, ಆಯೋಧ್ಯೆಗೆ ಪ್ರತಿನಿತ್ಯವೂ 1 ರಿಂದ 1.5 ಲಕ್ಷ ಜನ ನಿತ್ಯವೂ ದರ್ಶನಕ್ಕೆ ಬರುತ್ತಿದ್ದಾರೆ. ಬೆಳಗ್ಗೆ 6:30 ರಿಂದ 9:30 ರವರೆಗೆ ದರ್ಶನ ಪಡೆಯಲು ದೇಗುಲಕ್ಕೆ ಬರಬಹುದು. 60-75 ನಿಮಿಷದೊಳಗೆ ರಾಮಲಲ್ಲಾನ ದರ್ಶನ ಮುಗಿಸಿ ಹೊರಗೆ ಬರಬಹುದು. ಮೊಬೈಲ್, ಪರ್ಸ್ ಎಲ್ಲವನ್ನೂ ದೇಗುಲದ ಹೊರಗೆ ಇಟ್ಟು ಬಂದರೆ ಉತ್ತಮ. ಮುಖ್ಯವಾಗಿ ದರ್ಶನಕ್ಕೆ ಬರುವ ಭಕ್ತರು ಹೂವು ಹಣ್ಣು, ಪ್ರಸಾದ ಯಾವುದೂ ತರುವಂತಿಲ್ಲ ಎಂದು ಮನವಿ ಮಾಡಿದೆ.