ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಹೀಗಾಗಲೇ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ.
ಜೆಡಿಎಸ್ ಕಣ್ಣಿಟ್ಟ ಕ್ಷೇತ್ರಗಳನ್ನು ಬಿಟ್ಟುಕೊಡಲು ಸ್ಥಳೀಯ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ, ಹಾಸನ ಕ್ಷೇತ್ರಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಂತೆ ಸ್ಥಳೀಯ ಕಮಲ ಮುಖಂಡರಿಂದ ಆಗ್ರಹ ವ್ಯಕ್ತವಾಗಿದೆ.
ಹಾಸನ ಕ್ಷೇತ್ರವನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಪ್ರೀತಂ ಗೌಡ ಒತ್ತಾಯಿಸಿದ್ದಾರೆ. ಇತ್ತ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಮಾಜಿ ಸಚಿವ ನಾರಾಯಣ ಗೌಡರಿಂದ ಆಗ್ರಹ ಕೇಳಿಬಂದಿದೆ.
ಹಾಸನ ಬಳಿಕ ಮಂಡ್ಯದಲ್ಲೂ ಕ್ಷೇತ್ರ ಬಿಟ್ಟುಕೊಡದಂತೆ ಪ್ರೀತಂ ಗೌಡ ಗುಡುಗಿದ್ದಾರೆ. ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿಯ ಪಕ್ಷ ಸಂಘಟನೆ ಬಲಗೊಂಡಿದ್ದು, ಪಕ್ಷದಿಂದಲೇ ಅಭ್ಯರ್ಥಿ ಹಾಕಲು ಒತ್ತಡ ವ್ಯಕ್ತವಾಗಿದೆ
ಹಾಸನದಲ್ಲಿ ಜೆಡಿಎಸ್ ಸಂಸದರು ಇದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್ ಕೇಳುತ್ತಿದೆ. ಹಾಗಾದರೆ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅವರು ಸಂಸದರು, ಮಂಡ್ಯ ಬಿಟ್ಟುಕೊಡಲಿ ಎಂದು ಪ್ರೀತಂ ಗೌಡ ಠಕ್ಕರ್ ಕೊಟ್ಟಿದ್ದಾರೆ.
ಕ್ಷೇತ್ರ ಉಳಿಸಿಕೊಳ್ಳಿ ಎನ್ನುವುದು ಎರಡೂ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಒತ್ತಾಯ. ಸೀಟು ಹಂಚಿಕೆ ಅಂತಿಮವಾಗುವ ಮುನ್ನವೇ ಕ್ಷೇತ್ರಗಳಲ್ಲಿ ಜೆಡಿಎಸ್ ಚುನಾವಣಾ ಸಿದ್ಧತೆಗೂ ಆಕ್ಷೇಪ ವ್ಯಕ್ತವಾಗಿದೆ. ಮಂಡ್ಯ, ಹಾಸನ ಕ್ಷೇತ್ರಗಳನ್ನು ಜೆಡಿಎಸ್ಗೆ ಕೊಡಲು ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿರೋಧಿಸಿದ್ದಾರೆ. ಸ್ಥಳೀಯರ ವಿರೋಧವು ಬಿಜೆಪಿಗೆ ತಲೆನೋವಾಗಿದೆ.
ಎರಡೂ ಲೋಕಸಭೆ ಕ್ಷೇತ್ರಗಳ ವಿರೋಧ ಇತರೆ ಕ್ಷೇತ್ರಗಳಿಗೂ ವಿಸ್ತರಿಸುವ ಆತಂಕದಲ್ಲಿ ಕಮಲ ನಾಯಕರು ಇದ್ದಾರೆ. ಹೈಕಮಾಂಡ್ ಅಂಗಳಕ್ಕೆ ರಿಪೋರ್ಟ್ ಕಳಿಸಲು ಕಮಲ ಪಡೆ ಮುಂದಾಗಿದೆ. ಕ್ಷೇತ್ರ ಹಂಚಿಕೆ ಜಟಾಪಟಿ ಹೈಕಮಾಂಡ್ ಕೋರ್ಟಿನಲ್ಲಿ ಬೇಗ ಇತ್ಯರ್ಥ ಮಾಡಿ ಎಂದು ಮನವಿ ಮಾಡಲು ಮುಂದಾಗಿದ್ದಾರೆ.