ಬೆಂಗಳೂರು: ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು ಧ್ವನಿವರ್ಧಕ ಬಳಕೆ ನಿಯಂತ್ರಿಸಿ, ಮಕ್ಕಳು ಪರೀಕ್ಷೆಗೆ ಸಿದ್ದತೆ ನಡೆಸಲು ಸಹಕರಿಸಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದು ರಾಜ್ಯದ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. ಇದೀಗ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಸಿಬಿಎಸ್ಇ ಪದ್ಧತಿಯ ತರಗತಿಗಳ ಪರೀಕ್ಷೆಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ಎಲ್ಲಾ ಮಕ್ಕಳು ಅವರವರದೇ ಆದ ಆತಂಕದಿಂದ ಇರುತ್ತಾರೆ.
ಪರೀಕ್ಷೆಗಳಿಗೆ ಸಂಬಂಧಿಸಿದ ಸಿದ್ಧತೆಯನ್ನು ಬಹಳ ಗಂಭೀರವಾಗಿ ಮಾಡಿಕೊಳ್ಳುತ್ತಿರುತ್ತಾರೆ. ಅವರ ಕನಸುಗಳನ್ನು ನನಸು ಮಾಡಲು ಏನೆಲ್ಲಾ ಪ್ರಯತ್ನಗಳು ಬೇಕೋ ಅದನ್ನು ಮಾಡುತ್ತಾರೆ. ಹೀಗಿರುವಾಗ ನಮ್ಮೆಲ್ಲರ ಸಹಾನುಭೂತಿ, ಸಹಕಾರ ಈ ನಮ್ಮ ಮಕ್ಕಳ ಕಡೆಗೂ ಇರಬೇಕು. ಸಂಜೆಯ ಹೊತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮ ಮಾಡುವವರು, ಧಾರ್ಮಿಕ ಕಾರ್ಯಕ್ರಮ ನಡೆಸುವವರು, ರಾಜಕೀಯ ಕಾರ್ಯಕ್ರಮ ಯೋಜಿಸುವವರು, ಆರ್ಕೆಸ್ಟ್ರಾ ಮುಂತಾದ ಮನರಂಜನಾ ಕಾರ್ಯಕ್ರಮ ಮಾಡುವವರು, ಈ ಸಮಯದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.