ದೇಹದಲ್ಲಿರುವ ಎಲ್ಡಿಎಲ್ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುವಂಥ ಕೆಲವು ಉಪಾಯಗಳು ಮಹತ್ವದ ಪರಿಣಾಮ ಬೀರುತ್ತವೆ. ಅಂದರೆ, ದೇಹದ ಚಯಾಪಯವನ್ನು ಹೆಚ್ಚಿಸುವಂಥವು, ಜೀರ್ಣಾಂಗಗಳ ಕ್ಷಮತೆ ವೃದ್ಧಿಸುವಂಥವು, ಕೊಬ್ಬು ಹೀರಿಕೊಳ್ಳುವುದನ್ನು ತಡೆಯುವಂಥವು, ಇತ್ಯಾದಿ ಉಪಾಯಗಳು ಈ ವಿಷಯದಲ್ಲಿ ಸಹಕಾರಿ.
ಈ ನಿಟ್ಟಿನಲ್ಲಿ ಬೆಳ್ಳುಳ್ಳಿಯ ಗಾತ್ರ ಚಿಕ್ಕದಾದರೂ ಸಾಮರ್ಥ್ಯ ಚಿಕ್ಕದಲ್ಲ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಳ್ಳುಳ್ಳಿ ಕಷಾಯ ಕುಡಿಯುವುದು ಎಲ್ಡಿಎಲ್ ಕಡಿಮೆ ಮಾಡುವಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.
ಈ ಪುಟ್ಟ ಎಸಳುಗಳಲ್ಲಿರುವ ಅಲ್ಲಿಸಿನ್ ಅಂಶವು ಅತಿ ಪ್ರಬಲವಾದ ಉತ್ಕರ್ಷಣ ನಿರೋಧಕ. ಇದಕ್ಕೆ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯವೂ ಇದೆ. ಹಲವು ರೀತಿಯ ಸೋಂಕುಗಳನ್ನು ನಿಯಂತ್ರಿಸುವ ರೀತಿಯಲ್ಲಿ ದೇಹದ ಪ್ರತಿರೋಧಕ ಶಕ್ತಿಯನ್ನೂ ಉದ್ದೀಪಿಸುತ್ತದೆ. ಬೆಳಗಿನ ಹೊತ್ತು ಇದರ ಕಷಾಯವೊಂದು ಹೊಟ್ಟೆಗಿಳಿದರೆ, ದೇಹವನ್ನು ಎಲ್ಲ ರೀತಿಯಲ್ಲೂ ಇದು ಡಿಟಾಕ್ಸ್ ಮಾಡಬಲ್ಲದು. ಹೇಗೆ ಎಂಬುದನ್ನ ನೋಡೋಣ
ಬೆಳ್ಳುಳ್ಳಿಯು ದೇಹದಲ್ಲಿನ ಎಲ್ಡಿಎಲ್ ಕಡಿಮೆ ಮಾಡುವುದು ಮಾತ್ರವೇ ಅಲ್ಲ, ಎಚ್ಡಿಎಲ್ ಅಥವಾ ಒಳ್ಳೆಯ ಕೊಬ್ಬು ಹೆಚ್ಚಲು ನೆರವಾಗುತ್ತದೆ.
ದೇಹದಲ್ಲಿ ಯಾವುದೇ ರೀತಿಯ ಉರಿಯೂತ ಇದ್ದರೂ ಅದರಿಂದ ಅಂಗಾಂಗಗಳಿಗೆ ಸಂಕಟ ತಪ್ಪಿದ್ದಲ್ಲ. ಬೆಳ್ಳುಳ್ಳಿಯಲ್ಲಿ ಉರಿಯೂತ ಶಾಮಕ ಗುಣ ಪ್ರಬಲವಾಗಿದೆ.
ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಅಂಶವಾದ ರಕ್ತದೊತ್ತಡ ನಿವಾರಣೆಗೆ ಇದು ಸಹಾಯ ಮಾಡುತ್ತದೆ.
ಸೋಂಕುಗಳ ವಿರುದ್ಧ ಹೋರಾಡುವಂಥ ಪ್ರತಿರೋಧವನ್ನು ಬೆಳೆಸಿಕೊಳ್ಳಲು ನೆರವಾಗಿ, ದೇಹದ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.
ರಕ್ತ ಪರಿಚಲನೆಯನ್ನು ಸಾಂಗವಾಗಿಸಿ, ಎಲ್ಲ ಅಂಗಗಳ ಆರೋಗ್ಯವನ್ನು ಕಾಪಾಡುತ್ತದೆ
ಬೆಳ್ಳುಳ್ಳಿ ಕಷಾಯ ಮಾಡುವುದೇನೂ ಕಷ್ಟವಲ್ಲ. ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ, ಕುದಿಯುವ ನೀರಿನಲ್ಲಿ ಒಂದೆರಡು ನಿಮಿಷಗಳ ಕಾಲ ಹಾಕಿ. ಇದನ್ನು ಸೋಸಿ. ಉಗುರು ಬಿಸಿ ಇರುವಾಗಲೇ ನಿಂಬೆ ರಸ ಅಥವಾ ಜೇನುತುಪ್ಪದೊಂದಿಗೆ ಕುಡಿಯಿರಿ
ನಾರಿನಂಶ ಹೆಚ್ಚಿರುವ ಆಹಾರದ ಸೇವನೆ ಮಾಡಬೇಕು. ಉತ್ಕರ್ಷಣ ನಿರೋಧಕಗಳು ಹೆಚ್ಚಿರುವಂಥ ಹಣ್ಣುಗಳು ಮತ್ತು ತರಕಾರಿಗಳು ಈ ನಿಟ್ಟಿನಲ್ಲಿ ಬೇಕಾಗುವ ಅಂಶಗಳು. ಬಾದಾಮಿ, ವಾಲ್ನಟ್, ಅವಕಾಡೊದಂಥ ಒಳ್ಳೆಯ ಕೊಬ್ಬನ್ನು ಹೊಂದಿರುವ ಆಹಾರಗಳು ಸಹ ಅಗತ್ಯವಾಗಿ ಬೇಕು. ಓಟ್ಮೀಲ್, ಸಿರಿ ಧಾನ್ಯಗಳ ಬಳಕೆ ಮಾಡುವುದೊಳಿತು. ಯಾವುದೇ ಇಡೀ ಧಾನ್ಯಗಳು ಪೂರಕ ಪರಿಣಾಮ ಬೀರುತ್ತವೆ