ಕಡಿಮೆ ರಕ್ತದ ಒತ್ತಡದ ಗುಣ ಲಕ್ಷಣಗಳನ್ನು ಯಾರೂ ಸಹ ಅಲ್ಲಗಳೆಯುವಂತಿಲ್ಲ. ಅದರಲ್ಲೂ ಕೆಲವೊಮ್ಮೆ ಕಡಿಮೆ ರಕ್ತದ ಒತ್ತಡದ ಸೂಚನೆಗಳಿಂದ ಎದುರಾಗುವ ಸಮಸ್ಯೆಗಳು ಅಧಿಕ ರಕ್ತದ ಒತ್ತಡದ ಸಮಸ್ಯೆಗಳಿಗಿಂತ ಭಯಂಕರವಾಗಿರುತ್ತವೆ. ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೃದಯದ ತೊಂದರೆ, ಮೂತ್ರ ಪಿಂಡಗಳ ಹಾನಿ, ಪಾರ್ಶ್ವವಾಯು, ಬುದ್ದಿ ಮಾಂದ್ಯದಂತಹ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ಕಡಿಮೆ ರಕ್ತದ ಒತ್ತಡದ ಈ ಗುಣ ಲಕ್ಷಣಗಳಿಂದ ಪಾರಾಗಬೇಕಾದರೆ, ಈ ಕೆಳಗಡೆ ತಿಳಿಸಿರುವ ಕೆಲವೊಂದು ಮನೆ ಮದ್ದುಗಳನ್ನು ಪ್ರಯತ್ನಿಸಿ ನೋಡಿ
ಉಪ್ಪಿನ ನೀರು
ರಾಸಾಯನಿಕವಾಗಿ ಉಪ್ಪಿನ ವಿಶ್ಲೇಷಣೆ ಮಾಡಿದಾಗ ನಮಗೆ ಕಂಡು ಬರುವುದು ‘ ಸೋಡಿಯಂ ‘ ಮತ್ತು ‘ ಕ್ಲೋರೈಡ್ ‘ ಎಂಬ ಎರಡು ಅಂಶಗಳು. ವೈಜ್ಞಾನಿಕವಾಗಿ ಮನುಷ್ಯನ ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ಈ ಎರಡೂ ಅಂಶಗಳು ಬೇಕೇ ಬೇಕು. ಮನುಷ್ಯನ ದೇಹದಲ್ಲಿ ಸರಾಗವಾಗಿ ಹರಿಯುತ್ತಿರುವ ರಕ್ತ ಮತ್ತು ನೀರಿನ ಸಮತೋಲನ ಕಾಪಾಡಿಕೊಂಡು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವಲ್ಲಿ ಉಪ್ಪು ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ನೀವು ಒಂದು ವೇಳೆ ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ, ಹೆಚ್ಚಾಗಿ ಉಪ್ಪು ಅಥವಾ ಉಪ್ಪಿನ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ( ಉದಾಹರಣೆ : ಉಪ್ಪಿನಕಾಯಿ ). ಕಡಿಮೆ ರಕ್ತದ ಒತ್ತಡದಿಂದ ನಿಮಗೆ ತಲೆ ಸುತ್ತು ಅಥವಾ ವಾಕರಿಕೆ ಬರುವಂತಾದರೆ ಆ ಕ್ಷಣದಲ್ಲಿ ಉಪ್ಪಿನ ನೀರು ಸೇವಿಸುವುದು ನಿಮಗೆ ಬಹಳ ಸಹಾಯ ಮಾಡುತ್ತದೆ. ಅರ್ಧ ಟೀ ಚಮಚದಷ್ಟು ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಕದಡಿ ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿ ಕಡಿಮೆ ಇರುವ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ರೋಸ್ಮರಿ ಆಯಿಲ್
ರೋಸ್ಮರಿ ಎಸೆನ್ಶಿಯಲ್ ಆಯಿಲ್ ನಲ್ಲಿ ಮನುಷ್ಯನಿಗೆ ಬಹು ಆಯಾಮದ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಕರ್ಪೂರದ ಅಂಶವಿದೆ. ಇದು ಮನುಷ್ಯನ ದೇಹದಲ್ಲಿ ಕಡಿಮೆ ರಕ್ತದ ಒತ್ತಡದ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೊತೆಗೆ ಉಸಿರಾಟದ ವ್ಯವಸ್ಥೆಯನ್ನು ಉತ್ತಮಗೊಳಿಸಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಕೆಲವು ಹನಿಗಳಷ್ಟು ರೋಸ್ಮರಿ ಆಯಿಲ್ ಅನ್ನು ಅಂಗೈಯಲ್ಲಿ ಹಾಕಿಕೊಂಡು ಮೂಗಿನ ಬಳಿ ತಂದು ದೀರ್ಘವಾಗಿ ಉಸಿರು ಒಳ ತೆಗೆದುಕೊಂಡರೆ ಸಾಕು. ನಿಮ್ಮ ರಕ್ತದ ಒತ್ತಡದ ಮಟ್ಟ ಸಮಸ್ಥಿತಿಗೆ ವಾಪಸ್ ಬರುತ್ತದೆ.
ಕಾಫಿ ಅಥವಾ ಚಹಾದ ಸೇವನೆ ಮಾಡಿ
ಕೆಲವು ಸಂಶೋಧನಾ ಮೂಲಗಳ ಪ್ರಕಾರ ಕಾಫಿ ಅಥವಾ ಚಹಾ ಕುಡಿಯುವುದರಿಂದ ಮನುಷ್ಯನ ದೇಹದ ರಕ್ತದ ಒತ್ತಡಕ್ಕೆ ಬಹಳ ಪ್ರಯೋಜನವಾಗಲಿದೆ ಎಂದು ತಿಳಿದು ಬಂದಿದೆ. ಇದನ್ನು ವಿಶ್ಲೇಷಿಸಿ ನೋಡಿದಾಗ ಕಾಫಿ ಅಥವಾ ಚಹಾದಲ್ಲಿ ಕೆಫಿನ್ ಅಂಶವಿದ್ದು ಇದು ಹೃದಯದ ಬಡಿತವನ್ನು ಹೆಚ್ಚಿಸಿ ಕಡಿಮೆ ಇರುವ ರಕ್ತದ ಒತ್ತಡದ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ. ಸಕ್ಕರೆ ರಹಿತ ಕಾಫಿ ಅಥವಾ ಚಹಾ ಸೇವನೆ ಮಾಡುವುದರಿಂದ ಕಡಿಮೆ ರಕ್ತದ ಒತ್ತಡದ ಗುಣ ಲಕ್ಷಣಗಳನ್ನು ಹತೋಟಿಗೆ ತರಬಹುದು. ಆದರೆ ನೆನಪಿರಲಿ, ಕಾಫಿ ಅಥವಾ ಚಹಾದಲ್ಲಿರುವ ಕೆಫೀನ್ ಅಂಶದ ಪ್ರಭಾವ ದೇಹದ ಮೇಲೆ ಬಹಳ ಕಡಿಮೆ ಹೊತ್ತು ಅಥವಾ ತಾತ್ಕಾಲಿಕವಾಗಿ ಮಾತ್ರ ಕೆಲಸ ಮಾಡುತ್ತದೆ.
ಮುನಕ್ಕ
ಬಹಳ ಪುರಾತನ ಕಾಲದಿಂದಲೂ ತನ್ನಲ್ಲಿನ ವಿಶಿಷ್ಟ ಗುಣ ಲಕ್ಷಣಗಳಿಂದ ಮನುಷ್ಯನಿಗೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತಾ ಬಂದಿರುವ ಒಂದು ಆಹಾರ ಪದಾರ್ಥ ಎಂದರೆ ಅದು ಮುನಕ್ಕ. ಇದು ರಕ್ತದ ಒತ್ತಡದ ವಿಷಯದಲ್ಲಿ ಸಹ ಮನುಷ್ಯನಿಗೆ ಬಹಳ ಉಪಯೋಗಕ್ಕೆ ಬರುತ್ತದೆ. ಮನುಷ್ಯನ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ ರಕ್ತದ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡುತ್ತದೆ. ನೀವು ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಮುನಕ್ಕಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲಿನ ಜೊತೆ ಚೆನ್ನಾಗಿ ಕುದಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಕೇವಲ 3 – 4 ದಿನಗಳಲ್ಲಿ ನಿಮ್ಮ ರಕ್ತದ ಒತ್ತಡದ ಮಟ್ಟ ಸಹಜ ಸ್ಥಿತಿಗೆ ಬರುತ್ತದೆ.
ತುಳಸಿ ಎಲೆಗಳು
ಆಯುರ್ವೇದ ಪದ್ಧತಿಯಲ್ಲಿ ತುಳಸಿ ಎಲೆಗಳು ಉಪಯೋಗ ಮತ್ತು ಅದರ ಆರೋಗ್ಯ ಪ್ರಯೋಜನಗಳು ನಿಮಗೆ ಈಗಾಗಲೇ ತಿಳಿದಿದೆ. ನಮ್ಮ ಪೂರ್ವಜರು ಮನುಷ್ಯನಿಗೆ ಎದುರಾಗುವ ಅನೇಕ ರೋಗ ರುಜಿನಗಳಿಗೆ ತಾವು ಮಾಡುತ್ತಿದ್ದ ಆಯುರ್ವೇದ ಔಷಧಿಗಳಲ್ಲಿ ತುಳಸಿ ಎಲೆಗಳನ್ನು ಯಾವುದೇ ಎಗ್ಗಿಲ್ಲದೆ ಬಳಸುತ್ತಿದ್ದರು. ಈಗಿನ ಕಡಿಮೆ ರಕ್ತದ ಒತ್ತಡದ ಸಮಸ್ಯೆಗಳಿಗೂ ತುಳಸಿ ಎಲೆಗಳಲ್ಲಿ ಪರಿಹಾರವಿದೆ. ಹಚ್ಚ ಹಸಿರಾದ ತಾಜಾ ತುಳಸಿ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ,
ಮೆಗ್ನೀಷಿಯಂ ಮತ್ತು ವಿಟಮಿನ್ ‘ ಸಿ ‘ ಅಂಶ ಅಡಗಿದ್ದು, ಮನುಷ್ಯನ ರಕ್ತದ ಒತ್ತಡದ ನಿಯಂತ್ರಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಇದರಲ್ಲಿರುವ ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳು ಮನುಷ್ಯನ ದೇಹದ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿರ್ವಹಣೆ ಮಾಡುತ್ತದೆ. ಆದ್ದರಿಂದ ಕಡಿಮೆ ರಕ್ತದ ಒತ್ತಡದ ಸಮಸ್ಯೆಯಲ್ಲಿ ಸಿಲುಕಿರುವವರು ಪ್ರತಿ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ 4 – 5 ತುಳಸಿ ಎಲೆಗಳನ್ನು ಜಿಗಿಯುವ ಅಭ್ಯಾಸ ಮಾಡಿಕೊಂಡರೆ, ನಿಮ್ಮ ಸಮಸ್ಯೆಗೆ ಬಹಳ ಬೇಗನೆ ಒಳ್ಳೆಯ ಫಲಿತಾಂಶ ಲಭ್ಯವಾಗುತ್ತದೆ.