ಬೆಂಗಳೂರು: ಸಿಲಿಂಡರ್ ಸ್ಫೋಟವಾಗಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದೆ. ಅನಿಲ ಸಂಸ್ಕರಣೆ ಹಾಗೂ ವಿತರಣೆ ಮಾಡುವ ಗೇಲ್ ಸಂಸ್ಥೆಯು ನೆಲದಡಿಯಲ್ಲಿ ಅಳವಡಿಸಿದ್ದ ಅಡುಗೆ ಅನಿಲ ಸಂಪರ್ಕಿಸುವ ಪೈಪ್ನಲ್ಲಿ ಸೋರಿಕೆಯಾಗಿದೆ. ಈ ಸಂಬಂಧ ಮನೆಯೊಂದರಲ್ಲಿದ್ದ ಎರಡು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಸ್ಫೋಟದ ರಭಸಕ್ಕೆ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯರ ನೆರವಿನಿಂದ ಸಮೀಪದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟ ದುರಂತದ ಪರಿಣಾಮ ಮನೆಯಲ್ಲಿರುವ ಪಿಠೋಪಕರಣಗಳು ದ್ವಂಸಗೊಂಡಿವೆ. ಗಾಯಗೊಂಡವರ ಹೆಸರು ಲಭ್ಯವಾಗಿಲ್ಲ. ಮಾಹಿತಿ ಆಧರಿಸಿ ಎಚ್ಎಸ್ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಗೇಲ್ ಕಂಪನಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
