ಬೆಂಗಳೂರು: ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ವಿರೋಧಿಸಿ ಹಾಗೂ ಅಪಘಾತದಲ್ಲಿ ಮೃತಪಟ್ಟಿರುವವರ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಪ್ರತಿಭಟನೆ ನಡೆಸಿದೆ. ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ್ರು ನೇತೃತ್ವದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ನೂರಾರು ಜನ ಕಾರ್ಯಕರ್ತರು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಿಂದ ಎಕ್ಸ್ಪ್ರೆಸ್ ಹೈವೇ ನಿರ್ಮಾಣವಾಗಿದೆ. ಆದರೂ ಸಹ ಅದನ್ನ ಬಳಸಲು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತಿದೆ.ಸರಿಯಾದ ರಸ್ತೆ ಕಾಮಗಾರಿ ಆಗುವ ಮುನ್ನವೇ ಶ್ರೀರಂಗಪಟ್ಟಣದಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ.ರಸ್ತೆ ಉದ್ಘಾಟನೆಯಾದ ಬಳಿಕ ಸರಿಸುಮಾರು 150 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಐವತ್ತು ಲಕ್ಷ ಪರಿಹಾರ
ನೀಡಬೇಕು ಮತ್ತು ಕುಟುಂಬದವರಿಗೆ ಉದ್ಯೋಗ ನೀಡಬೇಕು. ಸರ್ವಿಸ್ ರಸ್ತೆಯನ್ನ ನೀಡಬೇಕು, ಹಾಗೂ ಆಸ್ಪತ್ರೆ, ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ್ರು ಒತ್ತಾಯಿಸಿದ್ದಾರೆ.
ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು. ಹೆಚ್ಚು ಅಪಘಾತವಾಗುತ್ತಿರುವ ಕಡೆಗಳಲ್ಲಿ ರಸ್ತೆ ಸರಿಪಡಿಸಬೇಕು. ಮುಖ್ಯಮಂತ್ರಿಗಳು, ಪ್ರಧಾನಿಗಳು ಇತ್ತ ಗಮನಹರಿಸಬೇಕು. ಹೈವೆಗೆ ವಿಧಿಸಿರುವ ಹೆಚ್ಚಿನ ಶುಲ್ಕವನ್ನ ವಾಪಾಸ್ ಪಡೆಯದಿದ್ದಲ್ಲಿ ಬೃಹತ್ ಪ್ರತಿಭಟನೆ ನೀಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.