ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಭೀಕರ ಮಳೆ ಸುರಿಯುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿದ್ದು ಜನರು ಪರದಾಡುತ್ತಿದ್ದಾರೆ. ಈ ಮಧ್ಯೆ ಗುಡ್ಡ ಕುಸಿತ ಸಂಭವಿಸಿದ್ದು ಪ್ರಯಾಣಿಕರಿದ್ದ ಎರಡು ಬಸ್ಸುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಈ ವೇಳೆ ಬಸ್ ನಲ್ಲಿದ್ದ ಇದರಲ್ಲಿದ್ದ 63 ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿತ್ವಾನ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದಾರೆ.
ಗುಡ್ಡ ಕುಸಿತದಿಂದ ಬಸ್ಸುಗಳು ಉಕ್ಕಿ ಹಿರಿಯುತ್ತಿದ್ದ ತ್ರಿಶೂಲಿ ನದಿಗೆ ಬಿದ್ದಿವೆ. ಇವುಗಳಲ್ಲಿ ಒಟ್ಟು 65 ಜನ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಮೂವರು ಮಾತ್ರ ಈಜಿ ದಡ ಸೇರಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಡ್ಡ ಕುಸಿತದ ರಭಸಕ್ಕೆ ರಸ್ತೆ ಬದಿಯಲ್ಲಿ ಕಾಂಕ್ರಿಟ್ನ ತಡೆಗೋಡೆಯನ್ನು ಭೇದಿಸಿ, 100 ಅಡಿ ಆಳದಲ್ಲಿ ಹರಿಯುತ್ತಿದ್ದ ನದಿಗೆ ಬಸ್ಸುಗಳು ಬಿದ್ದಿವೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಶೋಧ ಕಾರ್ಯ ಆರಂಭಗೊಂಡು ಹಲವು ಗಂಟೆಗಳೇ ಕಳೆದರೂ ವಾಹನ ಹಾಗೂ ಅದರೊಳಗಿದ್ದವರ ಮಾಹಿತಿ ಲಭ್ಯವಾಗಿಲ್ಲ. ನದಿಯ ಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್ಸುಗಳು ಕಠ್ಮಂಡುನಿಂದ ಪಶ್ಚಿಮಕ್ಕೆ 100 ಕಿ.ಮೀ. ದೂರದಲ್ಲಿರುವ ನಾರಾಯಣಘಾಟ್ ಹಾಗೂ ಮುಗ್ಲಿಂಗ್ ಹೆದ್ದಾರಿಯಲ್ಲಿ ಸಾಗುತ್ತಿದ್ದವು. ಒಂದು ಬಸ್ಸು ಕಠ್ಮಂಡುನಿಂದ ಗೌರ್ ಕಡೆ ಬರುತ್ತಿತ್ತು. ಮತ್ತೊಂದು ದಕ್ಷಿಣದಿಂದ ರಾಜಧಾನಿ ಕಡೆ ಸಾಗುತ್ತಿತ್ತು.
ಇದೇ ಸ್ಥಳದಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಬಂಡೆಯೊಂದು ಬಸ್ಸಿನ ಮೇಲೆ ಬಿದ್ದು ಚಾಲಕ ಮೃತಪಟ್ಟಿದ್ದಾರೆ.
ಘಟನೆ ಕುರಿತು ನೇಪಾಳದ ಪ್ರಧಾನಿ ಪುಷ್ಪಾ ಕಮಲ ದಾಹಲ್ ಅವರು ಶೋಕ ವ್ಯಕ್ತಪಡಿಸಿದ್ದಾರೆ. ‘ಅಪಘಾತದಲ್ಲಿ ಸಿಲುಕಿದವರ ಶೋಧ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗುವಂತೆ ಗೃಹ ಇಲಾಖೆಯನ್ನೂ ಒಳಗೊಂಡು ಸರ್ಕಾರದ ಎಲ್ಲಾ ಇಲಾಖೆಗಳಿಗೂ ಸೂಚಿಸಲಾಗಿದೆ’ ಎಂದಿದ್ದಾರೆ.