ಹೊಸದಿಲ್ಲಿ: ತಮ್ಮ ಗರಡಿಯಲ್ಲಿ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಗೆಲ್ಲಲು ಮಹತ್ತರ ಕಾಣಿಕೆ ನೀಡಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಮೇಲೆ ಭರವಸೆ ಇಟ್ಟು ಬಿಸಿಸಿಐ ಹೆಡ್ ಕೋಚ್ ಹುದ್ದೆ ನೀಡಿ ದಶಕದ ಟ್ರೋಫಿಯ ಬರ ನೀಗಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು ಆದರೆ ಆ ಕನಸು ಕೈಗೂಡಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ತಕ್ಷಣವೇ ಮಹಾಗೋಡೆಯನ್ನು ಮುಖ್ಯ ತರಬೇತುದಾರನ ಹುದ್ದೆಯಿಂದ ಕೆಡವಬೇಕೆಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಚೊಚ್ಚಲ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬೆನ್ನಲ್ಲೇ ರವಿಶಾಸ್ತ್ರಿಯನ್ನು ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿಸಿ ಬಿಸಿಸಿಐ ದ್ರಾವಿಡ್ ರನ್ನು ಕರೆ ತಂದಿತ್ತು. ಆದರೆ ಏಷ್ಯಾಕಪ್ ಟೂರ್ನಿ, ಟಿ 20 ವಿಶ್ವಕಪ್ ಟೂರ್ನಿ ಹಾಗೂ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲೂ ರೋಹಿತ್ ಶರ್ಮಾ ಪಡೆ ದ್ರಾವಿಡ್ ಗರಡಿಯಲ್ಲಿ ಮುಗ್ಗರಿಸಿದೆ.
ಟೆಸ್ಟ್ ಸ್ಪೆಷಾಲಿಸ್ಟ್ ಬ್ಯಾಟರ್ ಆಗಿದ್ದ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಬ್ಯಾಟಿಂಗ್ ಪಡೆಯೇ ಹಿನ್ನೆಡೆ ಅನುಭವಿಸಿ ಟ್ರೋಫಿ ಕೈಚೆಲ್ಲಿರುವುದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದು ಹೆಡ್ ಕೋಚ್ ಬದಲಾವಣೆಯ ಕೂಗು ಹೆಚ್ಚಾಗಿದೆ. ಏಕದಿನ ವಿಶ್ವಕಪ್ ವರೆಗೂ ದ್ರಾವಿಡ್ ರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆಗಳಿಲ್ಲ, ಒಂದು ವೇಳೆ ಭಾರತ ಏಕದಿನ ವಿಶ್ವಕಪ್ ಟೂರ್ನಿ ಗೆದ್ದರೆ ಆಗ ಅವರೇ ಈ ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆ ಇದೆ. ಟ್ರೋಫಿ ಗೆಲ್ಲಲು ಎಡವಿದರೆ ಸ್ಥಾನಕ್ಕೆ ಕುತ್ತು ಬರುತ್ತದೆ. ಆಗ ದ್ರಾವಿಡ್ ಸ್ಥಾನ ತುಂಬಬಲ್ಲ 5 ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಆಶೀಶ್ ನೆಹ್ರಾ (ಭಾರತ)
ಒಂದು ವೇಳೆ ಇಂಗ್ಲೆಂಡ್ ರೀತಿ ಕೋಚ್ ಹುದ್ದೆಯನ್ನು ವಿಭಜಿಸಿದರೆ ಆಗ ಭಾರತ ಟಿ20 ತಂಡಕ್ಕೆ ನೆಹ್ರಾಗಿಂತ ಉತ್ತಮ ಕೋಚ್ ಆಯ್ಕೆ ಸಿಗಲಾರರು. ಇನ್ನು ಮುಂದಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ಕ್ಯಾಪ್ಟನ್ ಆಗಲಿದ್ದಾರೆ. ಪಾಂಡ್ಯ-ನೆಹ್ರಾ ಜೋಡಿಯ ಮೋಡಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಕಾಣುವ ಸಾಧ್ಯತೆ ಇದೆ.
ಜಸ್ಟಿನ್ ಲ್ಯಾಂಗರ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾ ತಂಡವು ಜಸ್ಟಿನ್ ಲ್ಯಾಂಗರ್ ಅವರ ಗರಡಿಯಲ್ಲಿ 2021ರ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ತನ್ನ ಚೊಚ್ಚಲ ವಿಶ್ವಕಪ್ ಗೆದ್ದ ಸಾಧನೆ ಮೆರೆದಿತ್ತು. ಮಾಜಿ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಲ್ಯಾಂಗರ್ ಮಾರ್ಗದರ್ಶನದ ಅಡಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ 2021-22ರ ಸಾಲಿನ ಪ್ರತಿಷ್ಠಿತ ಆಷಸ್ ಟೆಸ್ಟ್ ಕ್ರಿಕೆಟ್ ಸರಣಿಯನ್ನೂ ಜಯಿಸಿತ್ತು.
ಸ್ಟೀಫನ್ ಫ್ಲೇಮಿಂಗ್ (ನ್ಯೂಜಿಲೆಂಡ್)
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಸ್ಟೀಫನ್ ಫ್ಲೇಮಿಂಗ್ ಕೋಚಿಂಗ್ ವಿಚಾರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ದಶಕಕ್ಕೂ ಹೆಚ್ಚು ಕಾಲ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಪಾತ್ರ ನಿಭಾಯಿಸಿದ್ದು, 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಏಕೈಕ ತರಬೇತುದಾರ ಎಂಬ ದಾಖಲೆ ಹಾಗೂ ಹೆಗ್ಗಳಿಕೆ ಹೊಂದಿದ್ದಾರೆ
ಗೌತಮ್ ಗಂಭೀರ್ (ಭಾರತ)
ಲಖನೌ ಸೂಪರ್ ಜಯಂಟ್ಸ್ ತಂಡ ಸತತವಾಗಿ ಐಪಿಎಲ್ ಟೂರ್ನಿಯ ಪ್ಲೇ-ಆಫ್ ಹಂತಕ್ಕೆ ತಲುಪಿದ ಸಾಧನೆ ಮೆರೆದಿದೆ. ಇದರ ಹಿಂದೆ ಮಹತ್ತರ ಪಾತ್ರ ವಹಿಸಿರುವ ಎಲ್ಎಸ್ಜಿ ಮೆಂಟರ್ ಗೌತಮ್ ಗಂಭೀರ್ ಕೂಡ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗುವ ಪ್ರಮುಖ ಸ್ಪರ್ಧಿ ಆಗಲಿದ್ದಾರೆ.
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾ ತಂಡಕ್ಕೆ ನಾಯಕರಾಗಿ 2 ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿರುವ ದಾಖಲೆ ಹೊಂದಿರುವ ರಿಕಿ ಪಾಂಟಿಂಗ್, ಐಪಿಎಲ್ನಲ್ಲಿ ಮುಖ್ಯ ಕೋಚ್ ಹುದ್ದೆ ಅಲಂಕರಿಸಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲಲು ಸಹಕರಿಸಿದ್ದಾರೆ. ಜೊತೆಗೆ ತಮ್ಮ ಮಾರ್ಗದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ತಲುಪುವಂತೆ ಮಾಡಿದ್ದರು. ಆದರೆ ಇತ್ತೀಚೆಗೆ ನಡೆದ ಕ್ಯಾಶ್ ರೀಚ್ ಲೀಗ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಳಪೆ ಪ್ರದರ್ಶನ ತೋರಿದ್ದು, ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ ಹೊರಬಂದರೆ ಅಚ್ಚರಿಯೇನಿಲ್ಲ