ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ಕೂಲ್ ಆಗಿರೋಣ ಅಂತ ತಂಪು ಪಾನೀಯಗಳನ್ನ ಸೇವಿಸಿದ್ರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಹೀಗಾಗಿ ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಬೇಸಿಗೆಗೆ ಹೇಳಿ ಮಾಡಿಸಿದ್ದು. ಅದರಲ್ಲೂ ಬೇಸಿಗೆಯಲ್ಲಿ ಪ್ರತಿದಿನ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಅದನ್ನ ಹೇಗೆ ಮಾಡೋದಪ್ಪಾ ಅಂತೀರಾ? ಇಲ್ಲಿದೆ ನೋಡಿ ಸಿಂಪಲ್ ವಿಧಾನ
ಬೇಕಾಗುವ ಸಾಮಾಗ್ರಿಗಳು:
ರಾಗಿ ಹಿಟ್ಟು – 4 ಚಮಚ
ಪುಡಿ ಮಾಡಿದ ಜೀರಿಗೆ – 1/2 ಚಮಚ
ಮೊಸರು ಅಥವಾ ಮಜ್ಜಿಗೆ – 1 ಕಪ್
ನೀರು – 2 ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟನ್ನು ಹಾಕಿ ಅದಕ್ಕೆ 1/2 ಕಪ್ ನಷ್ಟು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಉಳಿದ ನೀರು ಹಾಕಿ ಕಲಸಿಕೊಳ್ಳಿ.
* ನಂತರ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು, ರಾಗಿ ಹಿಟ್ಟಿನ ಮಿಶ್ರಣವನ್ನ ಹಾಕಿ ಗಂಟಾಗದಂತೆ ಕೈಯ್ಯಾಡಿಸುತ್ತಾ 3 ನಿಮಿಷದವರೆಗೆ ಕಾಯಿಸಿಕೊಳ್ಳಿ.
* ಹಿಟ್ಟು ಸ್ವಲ್ಪ ಗಟ್ಟಿ ಆದಾಗ ಅದಕ್ಕೆ ಉಪ್ಪು ಮತ್ತು ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಒಲೆಯಿಂದ ಕೆಳಗಿಳಿಸಿ ಆರಲು ಬಿಡಿ.
* ಗಂಜಿ ಸಂಪೂರ್ಣ ತಣ್ಣಗಾದ ನಂತರ ಮೊಸರು ಅಥವಾ ಮಜ್ಜಿಗೆಯನ್ನು ಹಾಕಿ ಮಿಕ್ಸ್ ಮಾಡಿದರೆ ರಾಗಿ ಅಂಬಲಿ ಸವಿಯಲು ಸಿದ್ಧ. ನಿಮಗೆ ಇಷ್ಟವಿದ್ದರೆ ಇದಕ್ಕೆ ಸಣ್ಣಗೆ ಕಟ್ ಮಾಡಿದ ಈರುಳ್ಳಿ ಸೇರಿಸಿಕೊಳ್ಳಬಹುದು.