ದಿನ ಕಳೆದಂತೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿಯುಂಟಾಗಿದೆ. ಬಿಸಿಲಿನಿಂದ ನಮ್ಮನ್ನು ನಾವು ಕಾಪಾಡಲು ಆರೋಗ್ಯಕರವಾದ ತಿಂಡಿ ತಿನಿಸುಗಳನ್ನು ಮತ್ತು ಫಲಾಹಾರಗಳನ್ನು ಜಾಸ್ತಿ ತಿಂದರೆ ಒಳ್ಳೆಯದು. ಅದೇ ರೀತಿ ಬಿಸಿಲಿನಲ್ಲಿ ಬಳಲಿ ಬಂದವರಿಗೆ ಎಳನೀರು ಶಕ್ತಿ ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಇವತ್ತು ನಾವು ಎಳನೀರಿನಿಂದ ತಯಾರಿಸಬಹುದಾದ ಒಂದು ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಈ ರೆಸಿಪಿಯ ಹೆಸರು ಎಳನೀರು ಮಿಲ್ಕ್ಶೇಕ್. ಹಾಗಿದ್ದರೆ ಇದನ್ನು ಹೇಗೆ ತಯಾರಿಸುವುದು ಎಂದು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ಎಳನೀರು- 1
ವೆನಿಲ್ಲಾ ಐಸ್ಕ್ರೀಮ್ – 1 ಕಪ್
ಹಾಲು- ಅರ್ಧ ಕಪ್
ಸಣ್ಣಗೆ ಹೆಚ್ಚಿದ ಬಾದಾಮ್ – ಸ್ವಲ್ಪ
ಸಣ್ಣಗೆ ಹೆಚ್ಚಿದ ಪಿಸ್ತಾ – ಸ್ವಲ್ಪ
ಕಂಡೆನ್ಸ್ಡ್ ಮಿಲ್ಕ್ – ಅಗತ್ಯಕ್ಕೆ ತಕ್ಕಷ್ಟು
ಐಸ್ ಕ್ಯೂಬ್ಸ್ – 4ರಿಂದ 5
ಮಾಡುವ ವಿಧಾನ:
- ಮೊದಲಿಗೆ ಎಳನೀರಿನ ಗಂಜಿಯನ್ನು ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಎಳನೀರಿನ ನೀರನ್ನು ಸಹಾ ಅದಕ್ಕೆ ಸೇರಿಸಿಕೊಳ್ಳಿ. ಬಳಿಕ 1 ಕಪ್ ವೆನಿಲ್ಲಾ ಐಸ್ಕ್ರೀಮ್, ಅರ್ಧ ಕಪ್ ಹಾಲು ಮತ್ತು ಹೆಚ್ಚಿದ ಬಾದಾಮ್ ಮತ್ತು ಪಿಸ್ತಾವನ್ನು ಹಾಕಿಕೊಳ್ಳಬೇಕು. ಬಳಿಕ ಇದಕ್ಕೆ ಸ್ವಲ್ಪ ಕಂಡೆನ್ಸ್ಡ್ ಮಿಲ್ಕ್ ಸೇರಿಸಿಕೊಳ್ಳಿ.
- ಬಳಿಕ ದೇಹಕ್ಕೆ ತಂಪೆನಿಸುವ ಐಸ್ಕ್ಯೂಬ್ಸ್ಗಳನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಡ್ರೈ ಫ್ರೂಟ್ಸ್ ಹಾಕಿ ಅಲಂಕರಿಸಿ ಸವಿಯಲು ಕೊಡಿ. ಇದು ಉತ್ತಮ ರುಚಿಯನ್ನು ನೀಡುವುದು