ವಿವಿಧವಾದ ಹೂವಿನ, ಗಡ್ಡೆ ಗೆಣಸು, ತರಕಾರಿ ಬೀಜಗಳು, ದೇವ ಧಾನ್ಯ, ಸೀರಿ ಧಾನ್ಯ, ಹೋಳಿಗೆ, ಹಪ್ಪಳ, ಚಿಪ್ಸ್ ಹೀಗೆ ಎಲ್ಲವೂ ಗ್ರಾಹಕರನ್ನು ಸೆಳೆಯುತ್ತಿದ್ದವು. ಇವೆಲ್ಲದರ ಆಕರ್ಷಣೆ ಮೀರಿ ಹಲಸಿನ ಹಣ್ಣಿನ ಘಮ ಇಡೀ ಪರಿಸರವನ್ನು ಆಹ್ಲಾದಗೊಳಿಸಿತ್ತು..
ಇಲ್ಲಿಯ ಮೂರು ಸಾವಿರ ಮಠದ ಸಭಾಭವನದಲ್ಲಿ ಸಹಜ ಸಮೃದ್ಧಿ ಸಂಸ್ಥೆ ಆಯೋಜಿಸಿದ್ದ ಸಾವಯವ ಮೇಳ ಹಾಗೂ ಹಲಸಿನ ಹಬ್ಬದಲ್ಲಿ ಕಂಡು ಬಂದ ದೃಶ್ಯಗಳಿವೂ.
ದುಂಡು ಹಲಸು, ಕಲಕಟ್ಟಿ ಲೋಕಲ್ ಹಲಸು , ಮೂಡಗೇರಿ ಹಲಸು, ಉದ್ದ ಹಲಸು, ಲಕ್ಷ್ಮೇಶ್ವರ, ಹೆಬ್ಬಲ ಹಲಸು, ಲಾಲಾಬಾಗ ಮಧುರಾ, ರುದ್ರಾಕ್ಷಿ ಹಲಸು, ಪುಟ್ಟ ಹಲಸ ಇವುಗಳ ನೋಡಲು ಜನ ಮುಗಿ ಬಿದ್ದಿದ್ದರು. ಬಹುತೇಕರಿಗೆ ಇಷ್ಟು ವಿವಿಧ ಹಲಸಿನ ಹಣ್ಣುಗಳಿರುವುದು ಗೊತ್ತಾಗಿದ್ದು, ಈ ಹಲಸಿನ ಹಬ್ಬದಲ್ಲಿ.
ದೇವ ಧ್ಯಾನ ರೈತ ಉತ್ಪಾದಕರ ಕಂಪನಿ ವಿವಿಧ ಧಾನ್ಯಗಳ ಹಾಗೂ ಸೀರಿ ಧಾನ್ಯಗಳು ಜನರನ್ನು ಆಕರ್ಷಿಸಿದವು. ವಿಶೇಷವಾಗಿ ಹಳದಿ ಸಿಹಿ ಗೆಣಸು, ಪರ್ಪಲ್ ಸಿಹಿ ಗೆಣಸು, ಸಿಂಧೊಲ್ಲಾ ಮಾವು, ಆಪೋಸ್ ಮಾವು ನೋಡಿ ಸಾರ್ವಜನಿಕರ ಬಾಯಲ್ಲಿ ನೀರು ಬಂದಿದ್ದು ಸುಳ್ಳಲ್ಲಾ.ಹಲಸಿನ ಹಣ್ಣಿನ ರಾಶಿಗೆ ಜೇನುನೊಣಗಳಂತೆ ಮುತ್ತಿದ್ದ ಜನರು, ಪೈಪೋಟಿಯಲ್ಲಿ ಹಣ್ಣನ್ನು ಖರೀದಿಸುತ್ತಿದ್ದರು. ೧೫ ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲಸು, ಮಾವು, ಬೆಲ್ಲ ಸೇರಿದಂತೆ ವಿವಿಧ ಉತ್ಪನ್ನಗಳು ಮಾರಾಟಕ್ಕಿದ್ದವು. ಬಿಸಿಬಿಸಿಯಾದ ಹಲಸಿನ ಬಜಿ ಖರೀದಿಸಿದ ಗ್ರಾಹಕರು.
ಹಲಸಿನ ಮೌಲ್ಯರ್ವತ ಉತ್ಪನ್ನಗಳು, ಗಡ್ಡೆ-ಗೆಣಸು, ಗೋ, ಬೆಲ್ಲ, ರಾಗಿಯಿಂದ ತಯಾರಿಸಿದ ಸಾವಯವ ಉತ್ಪನ್ನಗಳನ್ನು ಹುಬ್ಬಳ್ಳಿ-ಧಾರವಾಡ, ಗದಗ, ರಾಯಚೂರು ಮೊದಲಾದ ಭಾಗಗಳಿಂದ ರೈತರು, ಉತ್ಪಾದಕರು ತಂದಿದ್ದರು. ಸಂಜೆ ಹಲಸಿನ ಹಣ್ಣಿನಿಂದ ತಯಾರಿಸಿ ಅಡುಗೆ ಸ್ಪರ್ಧೆ ನಡೆಯಿತು.
ಬೆಳಿಗ್ಗೆ ಮೂರು ಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿದ್ದರು. ಧಾರವಾಡದ ಪ್ರಸೂತಿ ತಜ್ಞ ಹಾಗೂ ಸಹಜ ಕೃಷಿಕ ಡಾ. ಸಜೀವ ಕುಲಕಣಿ ಹಲಸಿನ ಹಣ್ಣಿನಿಂದ ಮಾಡುವ ವಸ್ತುಗಳ ಬಗ್ಗೆ ತಿಳಿಸಿದರು. ಮಳಲಿ ಗ್ರಾಮದ ಸಸಿ ಸಂರಕ್ಷಕಿ ಕಮಲವ್ವ ಕಾನಣ್ಣವರ ಇದ್ದರು.
ಮಾರುಕಟ್ಟೆ ಒದಗಿಸಲು ಅನುಕೂಲ:
ಹಲಸಿ ಹಣ್ಣು ಹಾಗೂ ಸಾವಯವ ಕೃಷಿಕರಿಗೆ ಒಳ್ಳೆಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಸಾವಯವ ಮೇಳ ಹಾಗೂ ಹಲಸಿನ ಹಬ್ಬ ಆಯೋಜಿಸಲಾಗಿದೆ. ಹಲಸಿನಿಂದ ತಯಾರಿಸುವ ಪದಾರ್ಥ ಹಾಗೂ ವಸ್ತುಗಳನ್ನು ಈ ಭಾಗದ ಜನರಿಗೆ ಪರಿಚಯಿಸಲಾಗುತ್ತಿದೆ ಎಂದು ಪತ್ರಕರ್ತ ಹರ್ಷವರ್ಧ ಶೀಲವಂತ ಹೇಳಿದರು.