ಪ್ರಯಾಣಿಕರನ್ನು ಹೊತ್ತೊಯ್ಯುವ ಮೊದಲ ಡ್ರೋನ್ ಪ್ರಯೋಗವು ಮಧ್ಯಪ್ರಾಚ್ಯದ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಅಬುಧಾಬಿ ಮೊಬಿಲಿಟಿ ವೀಕ್ನಲ್ಲಿ ಮಲ್ಟಿ ಲೆವೆಲ್ ಗ್ರೂಪ್, ಫಿನ್ಟೆಕ್ ಸಹಯೋಗದೊಂದಿಗೆ ಎರಡು ಡ್ರೋನ್ಗಳ ಪ್ರಯೋಗ ನಡೆಯಿತು.
350 ಕೆಜಿ ಪೇಲೋಡ್ನೊಂದಿಗೆ 25 ಕಿಮೀ ಗಿಂತ ಹೆಚ್ಚು ಪ್ರಯಾಣಿಸುವ ಸಾಮರ್ಥ್ಯವಿರುವ ಐದು ಆಸನಗಳ ಡ್ರೋನ್ ಮೊದಲ ಪ್ರಯೋಗದಲ್ಲಿ ಪಾಲ್ಗೊಂಡಿತ್ತು. ಎರಡನೇ ಪ್ರಯೋಗವು, ಸಣ್ಣ ಗಾತ್ರದ ಡ್ರೋನ್ ಅನ್ನು ಒಳಗೊಂಡಿತ್ತು. 20 ನಿಮಿಷಗಳ ಅವಧಿಯಲ್ಲಿ 35 ಕಿಮೀ ವರೆಗೆ ಇಬ್ಬರು ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಐದು ಆಸನಗಳ ಡ್ರೋನ್, 123 ಕಿಮೀ ವಿಸ್ತಾರವಾದ ಪ್ರದೇಶದಲ್ಲಿ 40 ನಿಮಿಷಗಳ ದಾಖಲೆ ಅವಧಿಯ ಹಾರಾಟ ನಡೆಸಿದೆ. ಡ್ರೋನ್ ಹಾರಾಟದಲ್ಲೇ ಇದು ದಾಖಲೆ ಬರೆದಿದೆ. MLG ಮಂಡಳಿಯ ಸದಸ್ಯ ಮೊಹಮ್ಮದ್ ಹಮದ್ ಅಲ್ ಧಹೇರಿ ಮಾತನಾಡಿ, ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದು ನಿಜಕ್ಕೂ ಹರ್ಷದಾಯಕವಾಗಿದೆ. ತಂತ್ರಜ್ಞಾನ ಮತ್ತು ವಾಯುಯಾನದ ಏಕೀಕರಣವು ನಮ್ಮ ರಾಷ್ಟ್ರದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.