ಬೆಂಗಳೂರು:- ರಾಜ್ಯದಲ್ಲಿ ಘೋಷಣೆಯಾಗಿರುವ 223 ಬರಪೀಡಿತ ತಾಲೂಕುಗಳಲ್ಲಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ಊಟ ನೀಡಲಾಗುತ್ತದೆ.
ಈ ಸಂಬಂಧ ರಾಜ್ಯದ ಎಲ್ಲ ಬಿಇಒ ಮತ್ತು ಡಿಡಿಪಿಐಗಳಿಂದ ಪಿಎಂ ಪೋಷಣ್ ನಿರ್ದೇಶಕರು ಮಾಹಿತಿ ಸಂಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ ವರದಿ ಅನ್ವಯ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರವು ಘೋಷಿಸಿದೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಒಟ್ಟು 41 ದಿನ ಬಿಸಿಯೂಟ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಪ್ರಸ್ತುತ ತರಗತಿವಾರು ದಾಖಲಾತಿ ಹಾಜರಾತಿಯಂತೆ ಬಿಸಿಯೂಟ ಸ್ವೀಕರಿಸಲು ಇಚ್ಛಿಸುವ/ಅಪೇಕ್ಷೆ ಹೊಂದಿರುವ ಮಕ್ಕಳ ಸಂಖ್ಯೆಯನ್ನು ಗುರುತಿಸುವ ಸಂಬಂಧ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಿನ ಸಹಾಯಕ ನಿರ್ದೇಶಕರು ಅಗತ್ಯ ಕ್ರಮ ವಹಿಸಿ ಜಿಲ್ಲಾವಾರು ಮಾಹಿತಿಯನ್ನು ಫೆ.3ರೊಳಗೆ ಕಳುಹಿಸುವಂತೆ ಸೂಚಿಸಲಾಗಿತ್ತು.
ಪಾಲಕರ ಒಪ್ಪಿಗೆ ಪತ್ರ ಕಡ್ಡಾಯ: ಶಾಲಾ ಹಂತದಲ್ಲಿ ತರಗತಿವಾರು ಪ್ರತಿ ವಿದ್ಯಾರ್ಥಿಯಿಂದ ಬಿಸಿಯೂಟವನ್ನು ಸ್ವೀಕರಿಸುವ ಸಲುವಾಗಿ ವಿದ್ಯಾರ್ಥಿ ಮತ್ತು ಪಾಲಕರಿಂದ ಒಪ್ಪಿಗೆ ಪತ್ರವನ್ನು ಶಾಲಾ ಮುಖ್ಯ ಶಿಕ್ಷಕರು ಪಡೆದುಕೊಳ್ಳಬೇಕು. ಒಪ್ಪಿಗೆ ಪತ್ರ ಆಧರಿಸಿ ಶಾಲಾ ಹಂತದಲ್ಲಿ ಬಿಸಿಯೂಟವನ್ನು ಸ್ವೀಕರಿಸುವ ಮಕ್ಕಳ ಸಂಖ್ಯೆಯನ್ನು ತಾಲೂಕು ಮತ್ತು ಜಿಲ್ಲಾವಾರು ಮಾಹಿತಿಯನ್ನು ಇಲಾಖೆಗೆ ತಿಳಿಸಬೇಕು ಎಂಬ ಸೂಚನೆ ನೀಡಲಾಗಿತ್ತು.
2023-24ನೇ ಸಾಲಿನ ಶೈಕ್ಷಣಿಕ ವರ್ಷವು ಏ.10ಕ್ಕೆ ಕೊನೆಗೊಳ್ಳಲಿದೆ. ಅಲ್ಲಿಯವರೆಗೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಅದಾದ ನಂತರ ಮೇ ಕೊನೇ ವಾರದಲ್ಲಿ ಶಾಲೆಗಳು ಆರಂಭವಾಗಲಿದೆ. ಈ ನಡುವೆ ಬರುವ ದಿನಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಬ್ಬ ಮತ್ತು ಲೋಕಸಭಾ ಚುವಾವಣೆ ದಿನಗಳನ್ನು ಹೊರತುಪಡಿಸಿ ಸದ್ಯ 41 ದಿನಗಳನ್ನು ಅಂದಾಜಿಸಿದೆ.