ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ನಗರದ ಜ್ಞಾನಭಾರತಿಯ ಉಲ್ಲಾಳದ ಬಳಿ ನಡೆದಿದೆ.
ಇತ್ತೀಚಿಗಷ್ಟೇ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಕಾಲಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡೇಟು ನೀಡಿದ್ದಾರೆ.
ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಕಡುಬು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ, ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಕಡುಬು ಮೇಲೆ ವಾರಂಟ್ ಇದ್ದರೂ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ನಡುವೆ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದ. ಬಳಿಕ ಆತನ ವಿಡಿಯೋ ಹರಿಬಿಟ್ಟಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಉಲ್ಲಾಳದ ಹಿಲ್ರಾಕ್ ಸ್ಕೂಲ್ ಬಳಿ ಬಂಧನಕ್ಕೆ ತೆರಳಿದ್ದರು
ಬಂಧನಕ್ಕೆ ತೆರಳಿದ್ದ ವೇಳೆ ಕಡುಬು ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ರೌಡಿಯ ಬಲಗಾಲಿಗೆ ಗೋವಿಂದರಾಜ ನಗರದ ಇನ್ಸ್ಪೆಕ್ಟರ್ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹೊಡೆದಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಕಡುಬುನನ್ನು ಬಂಧಿಸಿದ್ದಾರೆ.