ಈಗೇನಿದ್ದರು ಸೋಷಿಯಲ್ ಮೀಡಿಯಾದ್ದೇ ಕಾರು ಬಾರು. ಬಹುತೇಕರು ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಅಪ್ಡೇಟ್ ಮಾಡೋ ಖಯಾಲಿ ಬೆಳೆಸಿಕೊಂಡಿರುತ್ತಾರೆ. ಎಲ್ಲಿಗೆ ಪ್ರವಾಸ ಹೋಗುತ್ತಿದ್ದಾರೆ? ಯಾವ ಹೋಟೆಲ್ನಲ್ಲಿ ಊಟ ಮಾಡಿದ್ರು? ಎಲ್ಲಿ ಶಾಪಿಂಗ್ಗೆ ಹೋಗಿದ್ರು? ಹೀಗೆ ಪ್ರತಿಯೊಂದನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಕಳೆದ ಏಪ್ರಿಲ್ 28 ರಂದು ಈಕ್ವೆಡಾರ್ ದೇಶದ ಬ್ಯೂಟಿ ಕ್ವೀನ್, 2022ರ ಮಿಸ್ ಈಕ್ವೆಡಾರ್ ಕಿರೀಟ ಧರಿಸಿದ್ದ ಲ್ಯಾಂಡಿ ಪರಾಗ ಗೊಯ್ಬುರೊ ಅವರು ಹತ್ಯೆಗೀಡಾದರು. ಈಕ್ವೆಡಾರ್ ದೇಶದ ಕ್ವೆವೆಡೊ ನಗರದಲ್ಲಿ ಇರುವ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ದ ಈಕೆಯನ್ನು ಇಬ್ಬರು ಅಪರಿಚಿತ ಹಂತಕರು ಗುಂಡಿಟ್ಟು ಕೊಂದಿದ್ದರು. 23 ವರ್ಷ ವಯಸ್ಸಿನ ಲ್ಯಾಂಡಿ ಪರಾಗ ಗೊಯ್ಬುರೊ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಅಪಾರ ಅಭಿಮಾನಿಗಳು ಹೊಂದಿದ್ದರು. ಅವರೆಲ್ಲರೂ ಈ ಘಟನೆಗೆ ಆಘಾತ ವ್ಯಕ್ತಪಡಿಸಿದರು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಲ್ಯಾಂಡಿ ಪರಾಗ ಗೊಯ್ಬುರೊ ಅವರ ಇನ್ಸ್ಟಾಗ್ರಾಂ ಖಾತೆಯೇ ಸುಳಿವು ನೀಡಿದೆ.
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಲ್ಯಾಂಡಿ ಪರಾಗ ಗೊಯ್ಬುರೊ, ತಾವು ಎಲ್ಲೇ ಹೋಗಲಿ, ಏನೇ ಮಾಡಲಿ ಅದನ್ನು ತಪ್ಪದೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಡೇಟ್ ಮಾಡುತ್ತಿದ್ದರು. ಏಪ್ರಿಲ್ 28 ರಂದೂ ಕೂಡಾ ಆಕೆ ರೆಸ್ಟೋರೆಂಟ್ ಒಂದಕ್ಕೆ ಹೋಗಿ ತಾವು ಈ ರೆಸ್ಟೋರೆಂಟ್ನಲ್ಲಿ ಇರೋದಾಗಿ ಫೋಟೋ ಸಮೇತ ಇನ್ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡಿದ್ದರು. ಇದನ್ನು ನೋಡಿದ್ದೇ ತಡ, ಆಕೆಯ ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು, ರೆಸ್ಟೋರೆಂಟ್ಗೆ ಎಂಟ್ರಿಕೊಟ್ಟಿದ್ದಾರೆ.
ಮೃತ ಲ್ಯಾಂಡಿ ಪರಾಗ ಗೊಯ್ಬುರೊ ಅವರಿಗೆ ಲಿಯಾಂಡ್ರೊ ನೊರೆರೊ ಎಂಬಾತನ ಜೊತೆ ಗೆಳೆತನ ಇತ್ತು. ಆತ ಓರ್ವ ಮಾದಕ ದ್ರವ್ಯ ಸಾಗಾಟಗಾರನಾಗಿದ್ದ. ಕಳೆದ ವರ್ಷ ಜೈಲಿನಲ್ಲಿ ಇದ್ದ ವೇಳೆ ಜೈಲಿನಲ್ಲಿ ನಡೆದ ಹೊಡೆದಾಟದಲ್ಲಿ ಆತ ಮೃತಪಟ್ಟಿದ್ದಾನೆ.
ಮೂಲಗಳ ಪ್ರಕಾರ ಲಿಯಾಂಡ್ರೊ ನೊರೆರೊನ ಪತ್ನಿಯೇ ಬ್ಯೂಟಿ ಕ್ವೀನ್ ಲ್ಯಾಂಡಿ ಹತ್ಯೆಗೆ ಸುಪಾರಿ ಕೊಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಮೃತ ಬ್ಯೂಟಿ ಕ್ವೀನ್ ಲ್ಯಾಂಡಿ ವಿರುದ್ಧ ಭ್ರಷ್ಟಾಚಾರ ಆರೋಪವಿತ್ತು. ನ್ಯಾಯಾಂಗ ಅಧಿಕಾರಿಗಳಿಗೆ ಆಕೆ ಲಂಚ ಕೊಟ್ಟಿದ್ದಳು ಎನ್ನಲಾಗಿದೆ.