ಬೆಂಗಳೂರು: ಬೆಂಗಳೂರಿನಲ್ಲಿ (Bangalore )ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನಿಂದ (Sri Guru Raghavendra Cooperative Bank) ನಡೆದ ಬಹುಕೋಟಿ ವಂಚನೆ ಎಸಗಿದ ಆರೋಪ ಹಿನ್ನೆಲೆ ಬ್ಯಾಂಕ್ಗೆ ಸಂಬಂಧಿಸಿದ 114 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನು ಮಂಗಳವಾರ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿದೆ. ಗ್ರಾಹಕರ ಹಣವನ್ನ ಕಾನೂನುಬಾಹಿರವಾಗಿ ಪಡೆದುಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಬ್ಯಾಂಕ್ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬ್ಯಾಂಕ್ನ ಸುಸ್ತಿ ಸಾಲಗಾರರಿಗೆ ಸಂಬಂಧಿಸಿದ 114.19 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ. ಜಮೀನು, ಆಸ್ತಿಪತ್ರ, ಮನೆ ವಾಣಿಜ್ಯ ಹಾಗೂ ಕೈಗಾರಿಕಾ ಕಟ್ಟಡಗಳು ಸೇರಿದಂತೆ 21 ಸ್ಥಿರಾಸ್ತಿ ಹಾಗೂ ಬ್ಯಾಂಕ್ ಹೆಸರಿನಲ್ಲಿದ್ದ 3.15 ಕೋಟಿ ನಗದು ಹಣವನ್ನ ಜಪ್ತಿ ಮಾಡಿಕೊಂಡಿದೆ. ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರಡಿ ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.