ನಿರ್ದೇಶಕ ಗುರುಪ್ರಸಾದ್ ನಟಿಸಿ ನಿರ್ದೇಶನ ಮಾಡಿರುವ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ 2 ಇಂದು ಬಿಡುಗಡೆ ಆಗಬೇಕಿತ್ತು. ಆದ್ರೆ ಗುರುಪ್ರಸಾದ್ ಪತ್ನಿ ಸುಮಿತ್ರಾ ಕೋರ್ಟ್ ಮೆಟ್ಟಿಲೇರಿದ್ದು ಹೀಗಾಗಿ ಇಂದು ಬಿಡುಗಡೆ ಆಗಬೇಕಿದ್ದ ಸಿನಿಮಾಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮೈಸೂರು ರಮೇಶ್ ಮತ್ತು ರವಿ ದೀಕ್ಷಿತ್ ನಿರ್ಮಾಣ ಮಾಡಿದ, ಗುರುಪ್ರಸಾದ್ ನಿರ್ದೇಶಿಸಿ, ನಟಿಸಿದ್ದ ಎದ್ದೇಳು ಮಂಜುನಾಥ 2 ಸಿನಿಮಾ ಇಂದು (ಫೆ.21) ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಬಿಡುಗಡೆಯಾಗದಂತೆ ಗುರುಪ್ರಸಾದ್ 2ನೇ ಪತ್ನಿ ಸುಮಿತ್ರಾ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ.
ಸಿನಿಮಾದಲ್ಲಿ ಬಂದ ಲಾಭದಿಂದ ಶೇ.50 ರಷ್ಟು ಹಣವನ್ನು ಗುರುಪ್ರಸಾದ್ ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದೆವು. ಆದರೆ ಬಿಡುಗಡೆಗೂ ಮುನ್ನ 4 ಲಕ್ಷ ರೂ.ಗೆ ಸುಮಿತ್ರಾ ಬೇಡಿಕೆ ಇಟ್ಟಿದ್ದಾರೆ. ಸುಮಿತ್ರಾಗೆ ಮುಂಗಡ ಹಣ ನೀಡದ್ದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ನಿರ್ಮಾಪಕ ರಮೇಶ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಮಿತ್ರಾ, ಸಿನಿಮಾ ಪೂರ್ಣ ಮಾಡಬೇಕು ಎಂದು ಕಂಟೆಂಟ್ ತೆಗೆದುಕೊಂಡಿದ್ದಾರೆ. ನನ್ನ ಪತಿ ಮೃತದೇಹದ ಅಂತ್ಯಕ್ರಿಯೆಯೂ ಆಗಿರಲಿಲ್ಲ. ಆಗಲೇ ಕಂಟೆಂಟ್ ಕೊಡಿ ಎಂದು ಕೇಳಿದ್ದರು. ಸಿನಿಮಾ ಮುಗಿಸಲಿ ಎಂದು ನಾನು ಕೂಡ ಕಂಟೆಂಟ್ ನೀಡಿದೆ. ಗುರುಪ್ರಸಾದ್ ಬ್ಯಾನರ್ನಲ್ಲಿ ಸಿನಿಮಾ ಮಾಡುವುದಾಗಿ ನಿರ್ಮಾಪಕರು ಹೇಳಿದ್ದರು. ಆದರೆ ಈಗ ಎಲ್ಲವನ್ನೂ ತಮ್ಮ ಬ್ಯಾನರ್ನಲ್ಲೇ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
- ಕಥೆ, ಚಿತ್ರಕಥೆ ಎಲ್ಲಾ ನನ್ನ ಪತಿಯದ್ದು. ಆದ್ರೆ ಸಿನಿಮಾ ಮುಗಿದ ಮೇಲೆ 51% ರಷ್ಟು ಲಾಭ ತೆಗೆದುಕೊಳ್ಳಿ ಎಂದು ಹೇಳಿದರು. ನನ್ನ ಮಗು ಭವಿಷ್ಯಕ್ಕೆ ನಾನೆಲ್ಲಿ ಹೋಗಲಿ?. ಸಿನಿಮಾ ಆಡಿಯೋ ರಿಲೀಸ್ ವೇಳೆಯೇ ನನಗೆ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದರು.
