ಇಸ್ಲಾಮಾಬಾದ್: ಕಾಬೂಲ್ನಲ್ಲಿ ಬಂಧನಕ್ಕೊಳಗಾಗಿರುವ ‘ಪೆನ್ಪಾತ್’ ಸಂಸ್ಥಾಪಕ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಸಾಮಾಜಿಕ ಕಾರ್ಯಕರ್ತ ಮತಿವುಲ್ಲಾ ವೆಸಾ ಅವರ ಬಿಡುಗಡೆಗೆ ಒತ್ತಾಯಿಸಿ ತಾಲಿಬಾನ್ ಮೇಲೆ ಒತ್ತಡ ಹೇರಲಾಗಿದೆ.
ಮತಿವುಲ್ಲಾ ವೆಸಾ ’ಪೆನ್ಪಾತ್’ಎನ್ನುವ ಸರ್ಕಾರೇತರ ಸಂಸ್ಥೆಯ ಮೂಲಕ ಅಫ್ಗಾನಿಸ್ತಾನದಾದ್ಯಂತ ಮೊಬೈಲ್ ಶಾಲೆ ಹಾಗೂ ಗ್ರಂಥಾಲಯ ನಡೆಸುತ್ತಿದ್ದು ಅವರನ್ನು ಸೋಮವಾರ ಕಾಬೂಲ್ನಲ್ಲಿ ಬಂಧಿಸಲಾಗಿದೆ.
ಯುರೋಪ್ ಪ್ರವಾಸದಿಂದ ವಾಪಸಾದ ಮತಿವುಲ್ಲಾ ಅವರನ್ನು ತಾಲಿಬಾನ್ ಭದ್ರತಾ ಪಡೆಗಳು ಸೋಮವಾರ ಬಂಧಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದುವರೆಗೂ ತಾಲಿಬಾನ್ ಅಧಿಕಾರಿಗಳು ಅವರ ಬಂಧನವನ್ನು ದೃಢಪಡಿಸಿಲ್ಲ.
ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದ ಪ್ರಕಟಣೆಗಳ ನಿರ್ದೇಶಕ ಅಬ್ದುಲ್ ಹಕ್ ಹುಮಾದ್ ಅವರು ಮತಿವುಲ್ಲಾ ಅವರನ್ನು ಬಂಧನವನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದು, ‘ಮತಿವುಲ್ಲಾ ಅವರ ಕ್ರಮಗಳು ಅನುಮಾನಕ್ಕೆ ಆಸ್ಪದ ಕೊಡುವಂತಿವೆ. ಅಂಥವರಿಂದ ವಿವರಣೆಯನ್ನು ಕೇಳುವ ಅಧಿಕಾರ ವ್ಯವಸ್ಥೆಗೆ ಇದೆ’ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
‘ತಾಲಿಬಾನ್ ಪಡೆಗಳು ಮತಿವುಲ್ಲಾ ಅವರ ಕುಟುಂಬ ವಾಸವಿರುವ ಮನೆಯನ್ನು ಸುತ್ತುವರಿದಿವೆ. ಕುಟುಂಬ ಸದಸ್ಯರನ್ನು ಥಳಿಸಲಾಗಿದೆ’ ಎಂದೂ ಮತಿವುಲ್ಲಾ ಅವರ ಸಹೋದರ ಹೇಳಿದ್ದಾರೆ.
ಮತಿವುಲ್ಲಾ ಅವರು ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಮತ್ತು ಕಲಿಯುವ ಹಕ್ಕನ್ನು ಹೊಂದಿರಬೇಕು ಎನ್ನುವ ಕುರಿತು ಅನೇಕ ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ತಾಲಿಬಾನ್ ನೇತೃತ್ವದ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಹೇರಿರುವ ನಿಷೇಧಗಳನ್ನು ಹಿಂತೆಗೆದುಕೊಳ್ಳುವಂತೆ ಪದೇ ಪದೇ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.