ಶಿವಮೊಗ್ಗ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಅವ್ಯವಸ್ಥೆಯ ಆಗರ. ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಕಟ್ಟಡ ಸೋರುತ್ತಿದೆ. ವಿದ್ಯಾರ್ಥಿಗಳು ಕೊಠಡಿಯೊಳಗೆ ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ.
ಇದು ಶಿಕ್ಷಣ ಸಚಿವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆ. ಮಲೆನಾಡಿನಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮಳೆ ಎಡಬಿಡದೇ ಸುರಿಯುತ್ತದೆ. ಆದರೆ ಸರ್ಕಾರಿ ಪ್ರೌಢಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿರುವ ಪರಿಣಾಮ ಶಾಲೆಯ ಮಾಳಿಗೆ ಸೋರುತ್ತಿದೆ.
ಸೋರುತ್ತಿರುವ ಕೊಠಡಿಯೊಳಗೆ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವಂತಾಗಿದೆ. ಈ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10 ನೇ ತರಗತಿಯವರೆಗೆ ಸುಮಾರು 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವವರು ಎಲ್ಲರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಯಾವ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿಯುತ್ತದೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರೇ, ಶಿಕ್ಷಕರು ಆತಂಕದಲ್ಲೇ ಬೋಧನೆ ಮಾಡುವಂತಾಗಿದೆ. ಪೋಷಕರು ಹಾಗು ಸ್ಥಳೀಯರು ಶಾಲಾ ಕಟ್ಟಡ ದುರಸ್ತಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.