ಬೆಂಗಳೂರು: ರಾಜ್ಯದ ಅಸ್ಮಿತೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಉಪನ್ಯಾಸಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಕಾಲೇಜುಗಳಿಗೆ ಉಚಿತ ಕರೆಂಟ್ ನೀಡಲಾಗುವುದು. ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ನಿರಂತರ ನೀರಿನ ಸೌಲಭ್ಯ, ಫ್ರೀ ಕರೆಂಟ್ಗೆ 25 ಕೋಟಿ ರೂಪಾಯಿ ಮೀಸಲು ಇಡಲಾಗುವುದು. ಮಹಿಳಾ ಪಾಲಿಟೆಕ್ನಿಕ್ ಉನ್ನತೀಕರಣಕ್ಕೆ 30 ಕೋಟಿ ರೂ. ಮೀಸಲು ಇಡಲಾಗುವುದು. ರಾಜ್ಯದ 20 ಸಾವಿರ ವಿಜ್ಞಾನ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ತರಬೇತಿಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಅನುದಾನ, ಕಾಲೇಜು ಸೌಲಭ್ಯಕ್ಕಾಗಿ 250 ಕೋಟಿ ರೂಪಾಯಿ ಮೀಸಲು ಇಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಬಜೆಟ್ನಲ್ಲಿ ಏನಿದೆ?
ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸಲು ನಮ್ಮ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ. ಸರ್ಕಾರಿ ಶಾಲೆಯ ಮಕ್ಕಳೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬೇಕೆಂಬ ಆಶಯದೊಂದಿಗೆ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಾಥಮಿಕ ಪೂರ್ವ ಪದವಿ ಹಂತದಿಂದ ಪೂರ್ವ ತರಗತಿಗಳವರೆಗಿನ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಆಯ್ದ ಶಾಲೆಗಳನ್ನು ಸಿ.ಎಸ್.ಆರ್. ಅನುದಾನದಡಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು
3 ರಿಂದ 5 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸಿ ಸಾಮರ್ಥ್ಯ ಹೆಚ್ಚಿಸಲು ಜೆ-ಪಾಲ್ ಸಂಸ್ಥೆಯ ಸಹಯೋಗದಲ್ಲಿ ಗಣಿತ-ಗಣಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಲಿಕೆಯಲ್ಲಿ ಹಿಂದುಳಿದ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಸುಧಾರಿಸಲು 10 ಕೋಟಿ ರೂ. ಅನುದಾನದಲ್ಲಿ ಮರು ಸಿಂಚನ ಕಾರ್ಯಕ್ರಮ ಜಾರಿಗೊಳಿಸಲಾಗುವುದು