ಬೆಂಗಳೂರು: ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮೊಟ್ಟೆ ಎಸೆಯಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮುನಿರತ್ನ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆ ಮಾಡುವ ಉದ್ದೇಶದ ಮುಂದುವರಿದ ಭಾಗವಾಗಿ ಸಂಚಿನಂತೆ ಮೊಟ್ಟೆ ಎಸೆದಿದ್ದಾರೆಂದು ಮುನಿರತ್ನ ದೂರಿನಲ್ಲಿ ಉಲ್ಲೇಖಿಸಿದ್ದರು.
ಏತನ್ಮಧ್ಯೆ, ಮೊಟ್ಟೆ ಎಸೆದವರು ಎಂಬ ಆರೋಪ ಹೊತ್ತವರಿಂದಲೂ ಪ್ರತಿದೂರು ದಾಖಲಾಗಿದೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ಪ್ರತಿದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವನಾಥ, ಕೃಷ್ಣಮೂರ್ತಿ, ಚಂದ್ರು ಮೊಟ್ಟೆ ಎಸೆದಿದ್ದಾರೆಂಬ ಆರೋಪ ಎದುರಿಸುತ್ತಿದ್ದು, ಇವರನ್ನು ಘಟನಾ ಸ್ಥಳದಲ್ಲೇ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ನಂತರ ಮುನಿರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಪಡೆದು ಗುರುವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ.